ಜಮಖಂಡಿ 23: ತಾಲೂಕಿನ ಶ್ರೀಕ್ಷೇತ್ರ ಹಿಪ್ಪರಗಿ ಮಠದಲ್ಲಿ ಶ್ರೀ ಸ.ಸ. ಸಂಗಮೇಶ್ವರ ಮಹಾರಾಜರ 95ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನವೆಂಬರ್ 27ರಿಂದ 29ರವರೆಗೆ ಮೂರು ದಿನಗಳ ಅಧ್ಯಾತ್ಮ ಸಪ್ತಾಹ ಆಯೋಜಿಸಲಾಗಿದೆ ಎಂದು ಮಠದ ಶ್ರೀ ಸ.ಸ. ಪ್ರಭುಜಿ ಮಹಾರಾಜರು ತಿಳಿಸಿದರು.
ತಾಲೂಕಿನ ಗಿರಿಮಲ್ಲೇಶ್ವರ ಮಹಾರಾಜರ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಮಠಗಳ ಪೂಜ್ಯರು, ಸಂತರು, ದಿಂಡಿ ಹಾಗೂ ಪಲ್ಲಕ್ಕಿ ಪಾದಯಾತ್ರಿಗಳು ಪಾಲ್ಗೊಳ್ಳಲಿದ್ದಾರೆ. ನ.27ರಂದು ಬೆಳಿಗ್ಗೆ 11 ಗಂಟೆಗೆ ಪಾದಯಾತ್ರಿಗಳು ಹಾಗೂ ಭಕ್ತರನ್ನು ಸ್ವಾಗತಿಸಲಾಗುವುದು ಎಂದರು.
ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವಿಶೇಷ ಗೋಷ್ಠಿ ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಹಿರಿಯ ಮಹಾರಾಜರು ಮಾರ್ಗದರ್ಶನ ನೀಡಲಿದ್ದಾರೆ.ಇದೇ ವೇಳೆ ನೂರಾರು ತಂಡಗಳ ಭಾಗವಹಿಸುವ ನಿರೀಕ್ಷೆಯೊಂದಿಗೆ ಭಜನಾ ಮೇಳ ಹಾಗೂ ಕೈವಲ್ಯ ದಾಸರ ಭಕ್ತಿಗೀತೆಗಳ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಪ್ರಥಮ ₹15 ಸಾವಿರ, ದ್ವಿತೀಯ ₹11 ಸಾವಿರ, ತೃತೀಯ ₹8 ಸಾವಿರ ಹಾಗೂ ನಾಲ್ಕನೇ ಬಹುಮಾನ ₹5 ಸಾವಿರ ನಿಗದಿಪಡಿಸಲಾಗಿದೆ.
ರೈತರ ಬೆಳೆಗಳಿಗೆ ಸೂಕ್ತ ಬೆಲೆ, ಬೆಲೆ ನಿಗದಿ ಹಾಗೂ ಕೃಷಿ ಕ್ಷೇತ್ರದ ಸಮಸ್ಯೆಗಳ ಕುರಿತು ರೈತಗೋಷ್ಠಿ ಆಯೋಜಿಸಲಾಗಿದೆ. ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ ಚರ್ಚಿಸಲಿದ್ದಾರೆ.
ನ.28ರಂದು ಸಂಜೆ 5.30ಕ್ಕೆ ಸರ್ವಧರ್ಮ ಸಮನ್ವಯ ಹಾಗೂ ಏಕತಾ ಭಜನಾ ಸಮಾವೇಶ ನಡೆಯಲಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಮಠಗಳ ಪೂಜ್ಯರು, ಸಂತರು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ರಾತ್ರಿ 10ರಿಂದ ಬೆಳಗಿನವರೆಗೆ ಭಜನೆ, ಕೀರ್ತನೆ, ವಚನ ಗಾಯನ ಹಾಗೂ ನಾಟಕ ಪ್ರದರ್ಶನಗಳೊಂದಿಗೆ ಜಾಗರಣೆ ನಡೆಯಲಿದೆ.
ನ.29ರಂದು ಬೆಳಿಗ್ಗೆ 9.30ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ವಿವಿಧ ಮಠಗಳ ಪೂಜ್ಯರಿಗೆ ಸತ್ಕಾರ ಹಾಗೂ ಧಾರ್ಮಿಕ ಪ್ರವಚನಗಳು ನಡೆಯಲಿವೆ. ಮೂರು ದಿನಗಳ ಕಾಲ ಆಗಮಿಸುವ ಭಕ್ತರಿಗೆ ನಿರಂತರ ದಾಸೋಹ ಮತ್ತು ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ.
ಶ್ರೀ ಸಂಗಮೇಶ್ವರ ಮಹಾರಾಜರು ಸಮಾಜಸೇವೆ, ಧಾರ್ಮಿಕ ಜಾಗೃತಿ ಹಾಗೂ ಸಮಾಜ ಸಂಘಟನೆಯಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸುವುದರ ಜೊತೆಗೆ ಭಕ್ತಿ, ಸಂಸ್ಕಾರ, ಸಾಮಾಜಿಕ ಸಾಮರಸ್ಯ ಹಾಗೂ ರೈತರ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದು ಅಧ್ಯಾತ್ಮ ಸಪ್ತಾಹದ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುರು ಸಿದ್ದಪ್ಪ ಮಹಾರಾಜರು, ಗುರುಲಿಂಗಪ್ಪ ಪಡಸಲಿಗೆ, ಪ್ರದೀಪ್ ಮೆಟಗುಡ್ಡ ಮಹಾರಾಜರು ಹಾಗೂ ಸಂಗಪ್ಪ ಬಾಗೇವಾಡಿ ಉಪಸ್ಥಿತರಿದ್ದರು.
ವರದಿ : ಶಿವಾನಂದ ಚನ್ನಯ್ಯ ಪೂಜಾರಿ



