ಜೆಜೆಎಂ ಕಾಮಗಾರಿ ಪರಿಶೀಲಿಸದೆ ಬಿಲ್ ಪಾವತಿಸಬೇಡಿ: ಪ್ರವೀಣ ಹೊಳಪ್ಪಗೋಳ
ಜಮಖಂಡಿ: ತಾಲೂಕಿನ ಹುನ್ನೂರು ಗ್ರಾಮದಲ್ಲಿ 2021ರಲ್ಲಿ ಪೂರ್ಣಗೊಳ್ಳಬೇಕಿದ್ದ ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿ 2026ರ ಅಂತ್ಯ ಸಮೀಪಿಸುತ್ತಿದ್ದರೂ ಪೂರ್ಣಗೊಂಡಿಲ್ಲ. ಅಳವಡಿಸಿರುವ ಪೈಪ್ಗಳು ಎರಡು-ಮೂರು ಬಾರಿ ಹಾಳಾಗಿದ್ದು, 1ರಿಂದ 8ನೇ ವಾರ್ಡ್ಗಳಲ್ಲಿ ಕಾಮಗಾರಿ ವಿಭಿನ್ನ ಮಾದರಿಯಲ್ಲಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಕರ್ನಾಟಕ ಭೀಮ ಸೇನೆ ಜಿಲ್ಲಾಧ್ಯಕ್ಷ ಪ್ರವೀಣ ಹೊಳಪ್ಪಗೋಳ ಆರೋಪಿಸಿದರು.
ನಗರದ ಜೆಜೆಎಂ ಕಚೇರಿಯಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ಸಮಸ್ಯೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇವೆ ಎನ್ನುತ್ತಾರೆ. ಆದರೆ ಕಾಮಗಾರಿ ಸರಿಪಡಿಸುವ ಕೆಲಸ ಮಾತ್ರ ಆಗುತ್ತಿಲ್ಲ. ಅಧಿಕಾರಿಗಳ ಸೂಚನೆಗೂ ಗುತ್ತಿಗೆದಾರರು ಸ್ಪಂದಿಸದಿರುವುದು ಏಕೆ? ಎಂದು ಪ್ರಶ್ನಿಸಿದರು.
ಹುನ್ನೂರು ಗ್ರಾಮದಲ್ಲಿ ವಿಶೇಷ ಸಭೆ ಕರೆದು ಸಾರ್ವಜನಿಕರ ಸಮ್ಮುಖದಲ್ಲಿ ಪ್ರತಿಯೊಂದು ವಾರ್ಡ್ನ ಕಾಮಗಾರಿಯ ಗುಣಮಟ್ಟ ಪರಿಶೀಲಿಸಬೇಕು. ಅಂದಾಜು ಪಟ್ಟಿ ಹಾಗೂ ತಾಂತ್ರಿಕ ದಾಖಲೆಗಳನ್ನು ಪರಿಶೀಲಿಸಿ ಲೋಪದೋಷಗಳನ್ನು ಸರಿಪಡಿಸಬೇಕು. ಕಾಮಗಾರಿ ಸಂಪೂರ್ಣ ಗುಣಮಟ್ಟದಿಂದ ಪೂರ್ಣಗೊಳ್ಳುವವರೆಗೆ ಗುತ್ತಿಗೆದಾರರಿಗೆ ಅಂತಿಮ ಬಿಲ್ ಪಾವತಿಸಬಾರದು ಹಾಗೂ ಪೂರ್ಣಗೊಂಡ ಪ್ರಮಾಣಪತ್ರ ನೀಡಬಾರದು. ಇಲ್ಲದಿದ್ದರೆ ಗ್ರಾಮಸ್ಥರೊಂದಿಗೆ ಸೇರಿ ಅಧಿಕಾರಿಗಳ ಕಚೇರಿ ಎದುರು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.



