ಜಮಖಂಡಿ: ತಾಲೂಕು ಆಡಳಿತ ಸೌಧದ ಕೆಳಮಹಡಿಯಲ್ಲಿರುವ ಜಿಲ್ಲಾ ದಸ್ತು ಬರಹಗಾರರಿಗೆ ಮೀಸಲಾದ ಅಂಗಡಿಗಳಲ್ಲಿ ಜೆರಾಕ್ಸ್ ವ್ಯಾಪಾರ ನಡೆಸುತ್ತಿರುವುದರ ಕುರಿತು ಪರಿಶೀಲನೆ ನಡೆಸಬೇಕು. ಅಲ್ಲದೆ, ಒಂದು ಸಾಮಾನ್ಯ ಜೆರಾಕ್ಸ್ ಪ್ರತಿಗೆ ₹20 ವಸೂಲಿ ಮಾಡುತ್ತಿರುವ ಬಗ್ಗೆ ತನಿಖೆ ನಡೆಸಿ, ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸೇವೆ ಒದಗಿಸಲು ಆಡಳಿತ ಸೌಧದ ಹೊರಭಾಗದಲ್ಲಿ ಪ್ರತ್ಯೇಕ ಜೆರಾಕ್ಸ್ ಅಂಗಡಿ ತೆರೆಯಲು ಅವಕಾಶ ನೀಡಬೇಕು ಎಂದು ಭೀಮ ಆರ್ಮಿ ಭಾರತ ಏಕತಾ ಮಿಷನ್ ಬಾಗಲಕೋಟ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಕುರಿತು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ ಭೀಮ ಆರ್ಮಿ ಪದಾಧಿಕಾರಿಗಳು, ಆಡಳಿತ ಸೌಧಕ್ಕೆ ಪ್ರತಿನಿತ್ಯ ಬರುವ ರೈತರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಬಡ ಸಾರ್ವಜನಿಕರು ಸರ್ಕಾರಿ ಕೆಲಸಗಳಿಗಾಗಿ ದಾಖಲೆಗಳ ಜೆರಾಕ್ಸ್ ಮಾಡಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಒಂದು ಪ್ರತಿಗೆ ₹20 ಪಡೆಯುವುದು ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ದಸ್ತು ಬರಹಗಾರರಿಗೆ ಮೀಸಲಿಟ್ಟ ಅಂಗಡಿಗಳಲ್ಲಿ ಜೆರಾಕ್ಸ್ ವ್ಯಾಪಾರ ನಡೆಸಲು ಅನುಮತಿ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಅಂಗಡಿ ಹಂಚಿಕೆ ಮತ್ತು ಗುತ್ತಿಗೆ ಷರತ್ತುಗಳ ಉದ್ದೇಶವನ್ನು ಸ್ಪಷ್ಟಪಡಿಸಬೇಕು. ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಜೆರಾಕ್ಸ್ ಸೇವೆ ಸಿಗುವಂತೆ ಒಂದು ಪ್ರತಿಗೆ ₹2ರಂತೆ ದರ ನಿಗದಿಪಡಿಸಿ, ದರಪಟ್ಟಿ ಪ್ರದರ್ಶಿಸುವ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಅಂಗಡಿ ಸಂಖ್ಯೆ 5ರ ಕಾಡಸಿದ್ದೇಶ್ವರ ಜೆರಾಕ್ಸ್ನಲ್ಲಿ ₹20 ದರ ವಸೂಲಿ ಮಾಡುತ್ತಿರುವ ಕುರಿತು ತನಿಖೆ ನಡೆಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು. ಹೊಸ ಜೆರಾಕ್ಸ್ ಅಂಗಡಿಗೆ ಅರ್ಹರಿಗೆ ಪಾರದರ್ಶಕವಾಗಿ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪುಟ್ಟು ಪಾಣಿ, ರಮೇಶ್ ಬಳೋಳಗಿಡದ, ಚನಬಸು ಗುಣದಾಳ, ಕಿರಣ ಆರ್ಪಿಎಸ್ ಹಾಗೂ ರವಿ ಶಿಂಗೆ ಉಪಸ್ಥಿತರಿದ್ದರು.




