ಜಮಖಂಡಿ 26: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸ್ಥಳೀಯವಾಗಿಯೇ ದೊರಕಿಸುವ ಉದ್ದೇಶದಿಂದ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆ ಹಾಗೂ ಅಲೆನ್ ಕರಿಯರ್ ಅಕಾಡೆಮಿ ನಡುವೆ ಶೈಕ್ಷಣಿಕ ಒಪ್ಪಂದ ಮಾಡಿಕೊಳ್ಳಲಾಗಿದೆ. 2027-28ನೇ ಶೈಕ್ಷಣಿಕ ವರ್ಷದಿಂದ ಜಮಖಂಡಿಯಲ್ಲಿ ತರಬೇತಿ
ಆರಂಭವಾಗಲಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದರು.
ಇಲ್ಲಿನ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ವಿಜಯಪುರದಲ್ಲಿ ಅಲೆನ್ ಸಂಸ್ಥೆಯ ಸಹಯೋಗದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುತ್ತಿದೆ. ಇದೀಗ ಜಮಖಂಡಿಯಲ್ಲಿಯೂ ಈ ಸೌಲಭ್ಯ ಆರಂಭಿಸುವ ಮೂಲಕ ಬಾಗಲಕೋಟೆ, ವಿಜಯಪುರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ನೀಟ್ ಮತ್ತು ಜೆಇಇ ತರಬೇತಿಗಾಗಿ ವಿದ್ಯಾರ್ಥಿಗಳು ಬೆಂಗಳೂರು, ಮಂಗಳೂರು ದೂರದ ನಗರಗಳಿಗೆ ತೆರಳಬೇಕಾದ ಪರಿಸ್ಥಿತಿಯಿದೆ. ಇದರಿಂದ ಆರ್ಥಿಕವಾಗಿ ಪಾಲಕರಿಗೆ ಹೊರೆಯಾಗುವುದಲ್ಲದೆ, ವಿಶೇಷವಾಗಿ ಹೆಣ್ಣುಮಕ್ಕಳನ್ನು ದೂರದ ಊರುಗಳಿಗೆ ಕಳುಹಿಸಲು ಪಾಲಕರು ಹಿಂಜರಿಯುತ್ತಾರೆ. ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಜಮಖಂಡಿಯಲ್ಲಿಯೇ ಗುಣಮಟ್ಟದ ತರಬೇತಿ ಒದಗಿಸಲು ಮುಂದಾಗಿದ್ದೇವೆ ಎಂದು ಹೇಳಿದರು.
ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ.ಬಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ದೊರಕಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಅಲೆನ್ ಸಂಸ್ಥೆಯ ವಿಜಯಪುರ ವಿಭಾಗದ ಮುಖ್ಯಸ್ಥ ಪ್ರೇಮ್ ಕಿಶೋರ್ ಮಾತನಾಡಿ, 2027-28ನೇ ಶೈಕ್ಷಣಿಕ ವರ್ಷದಿಂದ ಜಮಖಂಡಿಯಲ್ಲಿ 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಫೌಂಡೇಶನ್ ಕೋರ್ಸ್ ಹಾಗೂ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಟ್, ಜೆಇಇ ಮತ್ತು ಜೆಇಇ ಅಡ್ವಾನ್ಸ್ ತರಬೇತಿ ಆರಂಭಿಸಲಾಗುವುದು. 6ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಒಲಿಂಪಿಯಾಡ್ ತರಬೇತಿಯನ್ನೂ ನೀಡುವ ಯೋಜನೆಯಿದೆ ಎಂದರು.
ಬಿ.ಎಲ್.ಡಿ.ಇ ಆಡಳಿತ ಮಂಡಳಿ ಅಧ್ಯಕ್ಷ ಅರುಣಕುಮಾರ ಶಾಹ ಹಾಗೂ ಪ್ರಾಧ್ಯಾಪಕ ಮತ್ತು ಆಡಳಿತಾಧಿಕಾರಿ ಪ್ರೊ. ಎಸ್.ಎಚ್. ಲಗಳಿ ಮಾತನಾಡಿ, ಜಮಖಂಡಿ ಭಾಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಅವರಿಗೆ ಸೂಕ್ತ ತರಬೇತಿ ಮತ್ತು ಅವಕಾಶ ಕಲ್ಪಿಸುವ ಅಗತ್ಯವಿದೆ. ಈ ಯೋಜನೆಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರು, ಆಡಳಿತಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9513397419, 9036052638.

