ಸಾಮಾಜಿಕ ಪರಿಣಾಮ ಬೀರುವ ಚಲನಚಿತ್ರಗಳು ಮೂಡಿಬರಲಿ: ಡಾ. ವಾದಿರಾಜ ದೇಶಪಾಂಡೆ

ಜಮಖಂಡಿ 23 : ಆಧುನಿಕ ಸಮಾಜದಲ್ಲಿ ಚಲನಚಿತ್ರಗಳು ಕೇವಲ ಮನರಂಜನೆಯ ಮಾಧ್ಯಮಗಳಾಗಿ ಉಳಿಯದೆ, ಸಾಮಾಜಿಕ ಚಿಂತನೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಜೀವನಶೈಲಿಯ ಬದಲಾವಣೆಗಳನ್ನು ಪ್ರತಿಬಿಂಬಿಸುವ ಪ್ರಬಲ ಮಾಧ್ಯಮಗಳಾಗಿ ಬೆಳೆದಿವೆ. ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಚಲನಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಮೂಡಿಬರಬೇಕಿದೆ ಎಂದು ಚಲನಚಿತ್ರ ಸಹ ನಿರ್ದೇಶಕ ಡಾ. ವಾದಿರಾಜ ದೇಶಪಾಂಡೆ ಹೇಳಿದರು.

ತಾಲೂಕಿನ ಕಾಜಿಬೀಳಗಿಯಲ್ಲಿ ಕೊಕ್ಕನವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ (ರಿ) ವತಿಯಿಂದ ಹಮ್ಮಿಕೊಂಡಿದ್ದ ‘ಸಿದ್ದಪ್ಪಜ್ಜ’ ಕಿರುಚಿತ್ರದ ಬಿಡುಗಡೆ, ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಸಮಸ್ಯೆಗಳು, ಮಹಿಳಾ ಸಬಲೀಕರಣ, ಶಿಕ್ಷಣ, ಪರಿಸರ ಸಂರಕ್ಷಣೆ, ಭಾವೈಕ್ಯತೆ ಹಾಗೂ ಮಾನವೀಯ ಮೌಲ್ಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಚಲನಚಿತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಮಾಜದ ವಿವಿಧ ಆಯಾಮಗಳನ್ನು ದೃಶ್ಯ ಮಾಧ್ಯಮದ ಮೂಲಕ ಜನರಿಗೆ ತಲುಪಿಸುವ ಶಕ್ತಿ ಚಿತ್ರರಂಗಕ್ಕಿದೆ ಎಂದರು.

ಮುಖ್ಯ ಅತಿಥಿ ಶಂಕರ ಹನಗಂಡಿ ಮಾತನಾಡಿ, ‘ಸಿದ್ದಪ್ಪಜ್ಜ’ ಕಿರುಚಿತ್ರವು ಆಧ್ಯಾತ್ಮಿಕ ತಳಹದಿಯ ಮೇಲೆ ಮೂಡಿಬಂದಿದೆ. ಆಸ್ತಿ, ಹಣ ಹಾಗೂ ಅಧಿಕಾರಕ್ಕಾಗಿ ಮಾನವೀಯ ಸಂಬಂಧಗಳು ಹಾಳಾಗಬಾರದು. ಶರೀರ ಅಸ್ಥಿರವಾದುದು ಎಂಬ ಸತ್ಯವನ್ನು ಮರೆಯಬಾರದು ಎಂಬ ಸಂದೇಶವನ್ನು ಯುವಜನರಲ್ಲಿ ಬಿತ್ತರಿಸುವ ಮೂಲಕ ಚಿತ್ರವು ಬದುಕಿಗೆ ಹೊಸ ಭರವಸೆ ಮೂಡಿಸುತ್ತದೆ. ಕಲಾವಿದರ ಅಭಿನಯ ಮನೋಜ್ಞವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೊಕ್ಕನವರ ಅಕಾಡೆಮಿಯ ಸಂಸ್ಥಾಪಕ ಡಾ. ವೈ.ವೈ. ಕೊಕ್ಕನವರ ಮಾತನಾಡಿ, ಚಲನಚಿತ್ರಗಳು ಸಮಾಜದ ಮೇಲೆ ಬೀರುವ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ಸೃಜನಶೀಲತೆ, ಸಾಮಾಜಿಕ ಜವಾಬ್ದಾರಿ ಹಾಗೂ ಉತ್ತಮ ಮೌಲ್ಯಗಳಿಗೆ ಆದ್ಯತೆ ನೀಡಬೇಕು. ಕೇವಲ ವಾಣಿಜ್ಯ ಉದ್ದೇಶಕ್ಕಿಂತ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳ ನಿರ್ಮಾಣಕ್ಕೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ‘ಸಿದ್ದಪ್ಪಜ್ಜ’ ಉತ್ತಮ ಪ್ರಯತ್ನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ರೇವಣಸಿದ್ದ ಗೌಡರ, ನಿರ್ಮಾಪಕ ರಘುಚಂದ್ರ ಗೌಡರ, ತುಂಗಳ ಗ್ರಾಮ ಪಂಚಾಯಿತಿ ಪಿಡಿಒ ಅಶೋಕ ಜನಗೌಡ, ಪ್ರಥಮ ದರ್ಜೆ ಗುತ್ತಿಗೆದಾರ ಬಸುಗೌಡ ಪಾಟೀಲ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಚಿತ್ರ ಪ್ರದರ್ಶನದ ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಕೊಕ್ಕನವರ ಅಕಾಡೆಮಿ ಹಾಗೂ ಗೌಡರ ಫಿಲಂಸ್ ವತಿಯಿಂದ ಕಲಾವಿದರು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಭೀಮಶಿ ನಾವಿ ಪ್ರಾರ್ಥಿಸಿದರು. ಪ್ರತಿಭಾ ಕಡಕೋಳ ನಿರೂಪಿಸಿದರು. ಬಾಹುಬಲಿ ಬಿರಾದಾರ ವಂದಿಸಿದರು.

ವರದಿ : ಶಿವಾನಂದ ಚನ್ನಯ್ಯ ಪೂಜಾರಿ

Recent Articles

spot_img

Related Stories

Share via
Copy link