ಸಾಧಕರನ್ನು ಗುರುತಿಸಿ ಗೌರವಿಸುವುದೇ ಸೇವಾರತ್ನ ಪ್ರಶಸ್ತಿಯ ಉದ್ದೇಶ: ಡಾ. ಸಂಗಮೇಶ ಮಟೋಳಿ.

ಜಮಖಂಡಿ 21: ಶಿಕ್ಷಣ, ಸಾಹಿತ್ಯ, ಪತ್ರಿಕಾ, ವೈದ್ಯಕೀಯ, ಕ್ರೀಡೆ ಹಾಗೂ ಕಲಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸಿ, ಅವರಿಗೆ ಸೂಕ್ತ ಗೌರವ ಹಾಗೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ರಾಜ್ಯಮಟ್ಟದ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಪ್ರಯೋಜಕರಾದ ನಿವೃತ್ತ ಪ್ರಾಚಾರ್ಯ ಡಾ. ಸಂಗಮೇಶ ಮಟೋಳಿ ಹೇಳಿದರು.

22ರಂದು ಬಸವಭವನದಲ್ಲಿ ರಾಜ್ಯಮಟ್ಟದ ಸೇವಾರತ್ನ ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಸೇವಾ ಟ್ರಸ್ಟ್ (ರಿ) ಪುಣೆ, ಬಸವ ಸಮಿತಿ ಜಮಖಂಡಿ, ಸಾಹಿತ್ಯ ಸೌರಭ ವೇದಿಕೆ ಹಾಗೂ ಶ್ರೀ ವೀರೇಶ್ವರ ಪ್ರಕಾಶನ ಜಮಖಂಡಿ ಇವುಗಳ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ನವೆಂಬರ್ 22ರಂದು ಭಾನುವಾರ ಬೆಳಿಗ್ಗೆ 9.30ಕ್ಕೆ ನಗರದ ಬಸವಭವನದಲ್ಲಿ ರಾಜ್ಯಮಟ್ಟದ ಸೇವಾರತ್ನ ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ ಸಮಾರಂಭ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಒಟ್ಟು 56 ಸಾಧಕರನ್ನು ಪ್ರಶಸ್ತಿ ಹಾಗೂ ಸತ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಶಿಕ್ಷಣ, ಸಾಹಿತ್ಯ, ಪತ್ರಿಕಾ, ವೈದ್ಯಕೀಯ, ಉನ್ನತ ಶಿಕ್ಷಣ, ಕಾನೂನು, ಕ್ರೀಡೆ ಮತ್ತು ವಿವಿಧ ಕಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಲಾಗಿದೆ. ವಿಶೇಷವಾಗಿ ಕರಡಿ ಮೇಳ, ಗೊಂದಲಿಗರ ಹಾಡು, ತಾಳವಾದ್ಯ, ಗಣಿವಾದನ ಸೇರಿದಂತೆ ಗ್ರಾಮೀಣ ಹಾಗೂ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರನ್ನು ಗೌರವಿಸಲಾಗುವುದು. ರಾಷ್ಟ್ರಮಟ್ಟದಲ್ಲಿ ವಾಲಿಬಾಲ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಮಖಂಡಿ ತಾಲೂಕಿನ ಹುನ್ನೂರು, ಕಲ್ಲಹಳ್ಳಿ ಸೇರಿದಂತೆ ವಿವಿಧ ಭಾಗಗಳ ಕ್ರೀಡಾಪಟುಗಳನ್ನೂ ಗುರುತಿಸಲಾಗಿದೆ ಎಂದು ತಿಳಿಸಿದರು.

ಅಲ್ಲದೆ, ನಗರದ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ 10 ಮಹಿಳಾ ಹಾಗೂ 10 ಪುರುಷ ಪೌರಕಾರ್ಮಿಕರನ್ನು ಆಯ್ಕೆ ಮಾಡಿ ಗೌರವಿಸಲಾಗುವುದು. ಜಾತಿ, ಮತ, ಪಂಥ, ಪಕ್ಷದ ಭೇದವಿಲ್ಲದೆ ಸಾಧನೆ ಮತ್ತು ಸೇವೆಯನ್ನು ಮಾತ್ರ ಮಾನದಂಡವಾಗಿಟ್ಟುಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಯುವಜನರಲ್ಲಿ ಸಾಹಿತ್ಯಾಭಿರುಚಿ, ಕನ್ನಡ ಭಾಷಾಭಿಮಾನ ಹಾಗೂ ಸಂಸ್ಕೃತಿಯ ಬಗ್ಗೆ ಒಲವು ಮೂಡಿಸುವುದರ ಜೊತೆಗೆ ನಶಿಸುತ್ತಿರುವ ಗ್ರಾಮೀಣ ಕಲೆಗಳಿಗೆ ಪ್ರೋತ್ಸಾಹ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಡಾ. ಟಿ.ಪಿ. ಗಿರಡ್ಡಿ ಮಾತನಾಡಿ, ಸಮಾಜದಲ್ಲಿ ಅನೇಕ ಪ್ರತಿಭಾವಂತ ಸಾಧಕರಿದ್ದರೂ ಅವರಿಗೆ ಸೂಕ್ತ ಮನ್ನಣೆ ದೊರೆಯುವುದಿಲ್ಲ. ಅಂತಹವರನ್ನು ಗುರುತಿಸಿ ಗೌರವಿಸುವ ಮೂಲಕ ಮುಂದಿನ ಪೀಳಿಗೆಗೆ ಪ್ರೇರಣೆ ನೀಡುವ ಕಾರ್ಯವನ್ನು ಡಾ. ಸಂಗಮೇಶ ಮಟೋಳಿ ಮಾಡುತ್ತಿದ್ದಾರೆ. ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಸಂಸ್ಕಾರಗಳು ಉಳಿದು ಬೆಳೆಯಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ನಶಿಸುತ್ತಿರುವ ಕಲಾಪ್ರಕಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಉಳ್ಳಾಳದ ಶ್ರೀಗಳು ವಹಿಸಲಿದ್ದು, ಶಾಸಕ ಜಗದೀಶ ಗುಡಗುಂಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಆನಂದ ನ್ಯಾಮಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಸವ ಸೇವಾ ಟ್ರಸ್ಟ್ ಪುಣೆಯ ಅಧ್ಯಕ್ಷ ಶಿವಲಿಂಗ ಎನ್. ಡವಳೇಶ್ವರ ಹಾಗೂ ಇತರ ಗಣ್ಯರು ಉಪಸ್ಥಿತರಿರುವರು. ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ. ವೈ.ವೈ. ಕೊಕ್ಕನವರ್ ಅವರು ‘ಕನ್ನಡ ಭಾಷೆಯ ವೈಭವ’ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಜಮಖಂಡಿಯಲ್ಲಿ ರಾಜ್ಯಮಟ್ಟದ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಡಾ. ಸಂಗಮೇಶ ಮಟೋಳಿ ಹಾಗೂ ಡಾ. ಟಿ.ಪಿ. ಗಿರಡ್ಡಿ ಮಾತನಾಡಿದರು.

ಈ ವೇಳೆ ಸಾಹಿತ್ಯ ಸೌರಭ ವೇದಿಕೆಯ ಸಂಚಾಲಕ ಪ್ರೊ. ರಾಜಶೇಖರ ಹೊಸಟ್ಟಿ, ಶ್ರೀ ಬಾಹುಬಲಿ ಬಿರಾದಾರ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬರಹ : ಶಿವಾನಂದ ಚನ್ನಯ್ಯ ಪೂಜಾರಿ

Recent Articles

spot_img

Related Stories

Share via
Copy link