ಜಮಖಂಡಿಯಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟದ ಸಂಭ್ರಮ

ವಿವಿಧ ರಾಜ್ಯಗಳ ಕ್ರೀಡಾಪಟುಗಳ ಆಗಮನ | ಕಬಡ್ಡಿ ಅಂಕಣದಲ್ಲಿ ರೋಚಕ ಸೆಣಸಾಟ

ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಅಭಿಮಾನವನ್ನು ಕ್ರೀಡೆಯೊಂದಿಗೆ ಬೆಸೆಯುವ ಉದ್ದೇಶದಿಂದ ಆಯೋಜಿಸಿರುವ ರಾಷ್ಟ್ರಮಟ್ಟದ ಪಂದ್ಯಾವಳಿಗಳು ಕನ್ನಡ ಸಂಘದ ಆರು ದಶಕಗಳ ಸೇವಾ ಪಯಣಕ್ಕೆ ಕ್ರೀಡಾ ವೈಭವದ ಮೆರುಗು ನೀಡಿವೆ. ಕರ್ನಾಟಕ, ತಮಿಳುನಾಡು, ಗುಜರಾತ, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಿಂದ ಕ್ರೀಡಾಪಟುಗಳು ಆಗಮಿಸಿರುವುದರಿಂದ ಜಮಖಂಡಿ ನಗರ ಕ್ರೀಡಾ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದಿದೆ.

ಕನ್ನಡ ರಾಜ್ಯೋತ್ಸವದ ಸಂಭ್ರಮ ಹಾಗೂ ಕನ್ನಡ ಸಂಘದ 60ನೇ ವರ್ಷದ ಅಂಗವಾಗಿ ನಗರದಲ್ಲಿ ನಾಲ್ಕು ದಿನಗಳ ಕಾಲ ರಾಷ್ಟ್ರಮಟ್ಟದ ಮಹಿಳಾ ಮತ್ತು ಪುರುಷರ ಕಬಡ್ಡಿ, ಕುಸ್ತಿ, ಸೈಕ್ಲಿಂಗ್ ಹಾಗೂ ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ಬುಧವಾರ ಬೆಳಿಗ್ಗೆ ಮಹಿಳಾ ಕಬಡ್ಡಿ ಪಂದ್ಯಾವಳಿಗೆ ಚಾಲನೆ ದೊರೆತಿದ್ದು, ಕ್ರೀಡಾಂಗಣದಲ್ಲಿ ಆಟಗಾರ್ತಿಯರ ಮೈನವಿರೇಳಿಸುವ ಪ್ರದರ್ಶನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಪಂದ್ಯಗಳನ್ನು ವೀಕ್ಷಿಸಲು ಆಗಮಿಸಿದ್ದ ಕ್ರೀಡಾಭಿಮಾನಿಗಳ ಹರ್ಷೋದ್ಗಾರ, ಶಿಳ್ಳೆ ಹಾಗೂ ಚಪ್ಪಾಳೆಗಳು ಕ್ರೀಡಾಂಗಣದಲ್ಲಿ ಸಂಭ್ರಮದ ವಾತಾವರಣ ನಿರ್ಮಿಸಿದವು.

ಕಬಡ್ಡಿ ಅಂಕಣದಲ್ಲಿ ಎದುರಾಳಿ ತಂಡದ ಆಟಗಾರರನ್ನು ಮಣಿಸಲು ರೈಡರ್‌ಗಳು ನಡೆಸಿದ ಚುರುಕಿನ ದಾಳಿ, ರಕ್ಷಣಾ ಆಟಗಾರರ ಸಂಘಟಿತ ತಂತ್ರಗಾರಿಕೆ ಹಾಗೂ ಅಂಕಗಳಿಗಾಗಿ ನಡೆದ ರೋಚಕ ಸೆಣಸಾಟ ಕ್ರೀಡಾಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿತು. ಪ್ರತಿ ರೈಡ್‌ನಲ್ಲೂ ಆಟಗಾರರ ಸಾಹಸ, ಸಮಯಪ್ರಜ್ಞೆ ಮತ್ತು ದೈಹಿಕ ಸಾಮರ್ಥ್ಯ ಅನಾವರಣಗೊಂಡಿತು. ಎದುರಾಳಿ ಆಟಗಾರರನ್ನು ಹಿಡಿಯುವ ರಕ್ಷಣಾ ಪಡೆಯ ಕೌಶಲಕ್ಕೆ ಪ್ರೇಕ್ಷಕರಿಂದ ಭರ್ಜರಿ ಚಪ್ಪಾಳೆ ವ್ಯಕ್ತವಾಯಿತು.

ಮಹಿಳಾ ಕಬಡ್ಡಿ ಪಂದ್ಯಗಳು ಪುರುಷರ ಪಂದ್ಯಗಳಿಗೆ ಸರಿಸಾಟಿಯಾಗಿ ನಡೆದವು. ಮಹಿಳಾ ಆಟಗಾರ್ತಿಯರ ಆತ್ಮವಿಶ್ವಾಸ, ಹೋರಾಟದ ಮನೋಭಾವ ಹಾಗೂ ಕ್ರೀಡಾ ನೈಪುಣ್ಯ ಎಲ್ಲರ ಗಮನ ಸೆಳೆಯಿತು. ಅಂಕಗಳಿಗಾಗಿ ನಡೆದ ಜಿದ್ದಾಜಿದ್ದಿನ ಪೈಪೋಟಿ ಪಂದ್ಯಾವಳಿಗೆ ಮತ್ತಷ್ಟು ರಂಗು ತುಂಬಿತು.

ಮಹಿಳಾ ಕಬಡ್ಡಿ ಪಂದ್ಯಾವಳಿಯ ಫಲಿತಾಂಶಗಳು

– ಎಂ.ಕೆ. ಸ್ಪೋರ್ಟ್ಸ್ ತಮಿಳುನಾಡು ತಂಡವು ಬಾಗಲಕೋಟೆ ತಂಡವನ್ನು 28-25 ಅಂಕಗಳಿಂದ ಸೋಲಿಸಿತು.
– ಚಂಡೀಗಢ ತಂಡವು ಆರ್‌ಬಿಎಸ್‌ಸಿ ಮುಂಬೈ ತಂಡವನ್ನು 38-26 ಅಂಕಗಳಿಂದ ಪರಾಭವಗೊಳಿಸಿತು.
– ಎಸ್‌ಎಸ್‌ಬಿ ರಾಜಸ್ಥಾನ ತಂಡವು ನೇಲೈ ಸ್ಪೋರ್ಟ್ಸ್ ತಮಿಳುನಾಡು ತಂಡವನ್ನು 30-12 ಅಂಕಗಳಿಂದ ಸೋಲಿಸಿತು.
– ಭಾರತ ತಮಿಳುನಾಡು ತಂಡವು ಆರ್‌ಬಿಎಸ್‌ಸಿ ಮುಂಬೈ ತಂಡವನ್ನು 27-21 ಅಂಕಗಳಿಂದ ಮಣಿಸಿತು.
– ಸ್ವಾಮಿನಾರಾಯಣ ಗುಜರಾತ ತಂಡವು ಎಂ.ಕೆ. ಸ್ಪೋರ್ಟ್ಸ್ ತಮಿಳುನಾಡು ತಂಡವನ್ನು 41-27 ಅಂಕಗಳಿಂದ ಸೋಲಿಸಿತು.
– ಮಿಡ್‌ಲೈನ್ ಮುಂಬೈ ತಂಡವು ಬಾಗಲಕೋಟೆ ತಂಡವನ್ನು 32-13 ಅಂಕಗಳಿಂದ ಪರಾಭವಗೊಳಿಸಿತು.
– ಎಂಡಿಎಸ್ ತಂಡವು ಸೂರ್ಯ ತಮಿಳುನಾಡು ತಂಡವನ್ನು 33-13 ಅಂಕಗಳಿಂದ ಸೋಲಿಸಿತು.
– ಅಲ್ಟಿಮೇಟ್ ಹರಿಯಾಣ ತಂಡವು ಎಂ.ಕೆ.ವಿ.ಎಸ್. ತಮಿಳುನಾಡು ತಂಡವನ್ನು 29-18 ಅಂಕಗಳಿಂದ ಮಣಿಸಿತು.
– ಕರ್ನಾಟಕ ತಂಡವು ಚಂಡೀಗಢ ತಂಡವನ್ನು 37-15 ಅಂಕಗಳಿಂದ ಸೋಲಿಸಿತು.
– ಎಸ್‌ಎಸ್‌ಎ ಹರಿಯಾಣ ತಂಡವು ಕರ್ನಾಟಕ ತಂಡವನ್ನು 37-13 ಅಂಕಗಳಿಂದ ಪರಾಭವಗೊಳಿಸಿತು.
– ಎಸ್‌ಎಸ್‌ಬಿ ರಾಜಸ್ಥಾನ ತಂಡವು ಕರ್ನಾಟಕ ತಂಡವನ್ನು 30-24 ಅಂಕಗಳಿಂದ ಸೋಲಿಸಿತು.
– ಮುಂಬೈ ಪೊಲೀಸ್ ತಂಡವು ನೇಲೈ ಸ್ಪೋರ್ಟ್ಸ್ ತಮಿಳುನಾಡು ತಂಡವನ್ನು 35-11 ಅಂಕಗಳಿಂದ ಮಣಿಸಿತು.
– ರೈಲ್ವೆ ಸೌತ್ ತಂಡವು ದುರ್ಗಾಶಕ್ತಿ ತಂಡವನ್ನು 35-15 ಅಂಕಗಳಿಂದ ಸೋಲಿಸಿತು.
– ಮಿಡ್‌ಲೈನ್ ಮುಂಬೈ ತಂಡವು ಸ್ವಾಮಿನಾರಾಯಣ ಗುಜರಾತ ತಂಡವನ್ನು 39-16 ಅಂಕಗಳಿಂದ ಪರಾಭವಗೊಳಿಸಿತು.
– ಕರ್ನಾಟಕ ತಂಡವು ಭಾರತ ತಮಿಳುನಾಡು ತಂಡವನ್ನು 30-17 ಅಂಕಗಳಿಂದ ಸೋಲಿಸಿತು.
– ಸೂರ್ಯ ತಮಿಳುನಾಡು ತಂಡವು ಕರ್ನಾಟಕ ತಂಡವನ್ನು 32-22 ಅಂಕಗಳಿಂದ ಮಣಿಸಿತು.
– ದುರ್ಗಾಶಕ್ತಿ ಸವಣೂರ ತಂಡವು ಎಂ.ಕೆ.ವಿ.ಎಸ್. ತಮಿಳುನಾಡು ತಂಡವನ್ನು 27-24 ಅಂಕಗಳಿಂದ ಸೋಲಿಸಿತು.

ಕನ್ನಡ ಸಂಘದ ಅಧ್ಯಕ್ಷ ರಾಹುಲ ಕಲೂತಿ ಮಾತನಾಡಿ, ವಿವಿಧ ರಾಜ್ಯಗಳಿಂದ ಕ್ರೀಡಾಪಟುಗಳು ಜಮಖಂಡಿಗೆ ಆಗಮಿಸಿರುವುದರಿಂದ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರಾಷ್ಟ್ರಮಟ್ಟದ ಪಂದ್ಯಾವಳಿಗಳಿಗೆ ಕ್ರೀಡಾಭಿಮಾನಿಗಳು ಉತ್ತಮ ಸ್ಪಂದನೆ ನೀಡುತ್ತಿದ್ದು, ಎಲ್ಲೆಡೆ ಹರ್ಷದ ವಾತಾವರಣ ಕಂಡುಬರುತ್ತಿದೆ ಎಂದು ತಿಳಿಸಿದರು.

TEAM : AGASTYA TIMES

Recent Articles

spot_img

Related Stories

Share via
Copy link