ಬೆಂಗಳೂರು: ಸಿದ್ದರಾಮಯ್ಯ(Sidddaramaiah) ಸರ್ಕಾರ ಕೈಗೊಂಡಿದ್ದ ಕ್ಯಾಬಿನೆಟ್ ನಿರ್ಧಾರವನ್ನು ಬಿಜೆಪಿ(BJP) ಈಗ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಆರಂಭಿಸಿದೆ.
ಪಿಎಫ್ಐ ಮೇಲೆ ದಾಳಿ ನಡೆಯುತ್ತಿರುವ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯದಲ್ಲಿ ಪಿಎಫ್ಐ(PFI), ಎಸ್ಡಿಪಿಐ(SDPI) ಬೆಳೆಯಲು ಸಿದ್ದರಾಮಯ್ಯ ಕಾರಣ ಎಂದು ನೇರವಾಗಿ ಹೇಳಿ ಟೀಕಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಏನಾಗಿತ್ತು?
ಜೂನ್ 1, 2015 ರಂದು ಸಿದ್ದರಾಮಯ್ಯ ನೇತೃತ್ವದ ಕ್ಯಾಬಿನೆಟ್ ಪಿಎಫ್ಐ, ಕೆಎಫ್ಡಿ ಸಂಘಟನೆಗಳ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆದಿತ್ತು. ರಾಜ್ಯದ ವಿವಿಧೆಡೆಗಳಲ್ಲಿ ನಡೆದಿದ್ದ ಗಲಭೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬರೋಬ್ಬರಿ 175 ಪ್ರಕರಣಗಳನ್ನು ವಾಪಸ್ ಪಡೆಯಲಾಗಿತ್ತು.
ಸಿದ್ದರಾಮಯ್ಯ ಸರ್ಕಾರದ ನಿರ್ಧಾರದಿಂದ ಹಲವು ಗಲಭೆಕೋರರು ಪರಾರಿಯಾದರು ಎಂಬ ಆರೋಪ ಇದೆ. ಈ ವಿಚಾರ ಅಂದು ಚರ್ಚೆ ಆಗುತ್ತಿದ್ದಾಗ ಸರ್ಕಾರ ಅಮಾಯಕರ ಮೇಲೆ ಪ್ರಕರಣ ದಾಖಲಾಗಿದೆ. ಈ ಕಾರಣಕ್ಕೆ ವಾಪಸ್ ಪಡೆದಿದ್ದಾಗಿ ಸಮರ್ಥನೆ ನೀಡಿತ್ತು.
ಈಗ ಪಿಎಫ್ಐ ಸಂಘಟನೆಗಳ ಮೇಲೆ ದೇಶವ್ಯಾಪಿ ದಾಳಿ ನಡೆಯತ್ತಿದ್ದು, ಕರ್ನಾಟಕದಲ್ಲೂ ಮೂಲೆ ಮೂಲೆಗಳಲ್ಲಿ ಪಿಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗುತ್ತಿದೆ. ಈಗ ಇದೇ ಸಮಯವನ್ನು ಉಪಯೋಗಿಸಿಕೊಂಡ ಬಿಜೆಪಿ ಸಿದ್ದರಾಮಯ್ಯ ಸರ್ಕಾರದ ಮೇಲೆ ಚಾರ್ಜ್ಶೀಟ್ ಅಸ್ತ್ರ ಪ್ರಯೋಗ ಮಾಡಿ ಮಾಡಿ ಟೀಕೆ ಮಾಡಲು ಆರಂಭಿಸಿದೆ.
