ಚಿತ್ರದುರ್ಗ: ಜೆಜೆಎಂ ಪೈಪ್‌ಲೈನ್‌ನಲ್ಲಿ ಮಿಶ್ರಿತವಾದ ಕಲುಷಿತ ಚರಂಡಿ ನೀರು ಸೇವಿಸಿ 30ಕ್ಕೂ ಅಧಿಕ ಜನರು ಅಸ್ವಸ್ಥ

ಚಿತ್ರದುರ್ಗ: ಜೆಜೆಎಂ ಪೈಪ್‌ಲೈನ್‌ನಲ್ಲಿ ಮಿಶ್ರಿತವಾದ ಕಲುಷಿತ ಚರಂಡಿ ನೀರು ಸೇವಿಸಿ 30ಕ್ಕೂ ಅಧಿಕ ಜನರು ಅಸ್ವಸ್ಥರಾಗಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ನಾಗಸಮುದ್ರ ಗ್ರಾಮದಲ್ಲಿ ನಡೆದಿದೆ.

ನಾಗಸಮುದ್ರ ಗ್ರಾಮದಲ್ಲಿ ಕುಡಿಯುವ ನೀರಿನ (Polluted Water) ಮುಖ್ಯ ಪೈಪ್ ಹೊಡೆದಿದ್ದು, ಅದರೊಳಗೆ ಚರಂಡಿ ನೀರು ಮಿಶ್ರಣವಾಗಿ ಕಲುಷಿತಗೊಂಡಿರುವ ಹಿನ್ನಲೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಇಲ್ಲಿನ ಕುಡಿಯುವ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಗ್ಯ ಇಲಾಖೆ ತಂಡವು ಗ್ರಾಮದಲ್ಲಿ ಬೀಡು ಬಿಟ್ಟಿದೆ. ಆರೋಗ್ಯದಲ್ಲಿ ಏರುಪೇರಾಗಿರುವವರಿಗೆ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿ ತುರ್ತು ಸಂದರ್ಭಕ್ಕಾಗಿ ಅಂಬುಲೆನ್ಸ್ ರವಾನಿಸಿಲಾಗಿದೆ.

ಬುಧವಾರ ಸಂಜೆ ಗ್ರಾಮಸ್ಥರಲ್ಲಿ ಅಸ್ವಸ್ಥತೆ ಶುರುವಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ರಾಂಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ತೀವ್ರ ಅಸ್ವಸ್ಥರಾಗಿರುವ ಓಬಕ್ಕ ಹಾಗೂ ಚಾಮುಂಡಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮದಲ್ಲಿ ಪೈಪ್‌ಗಳ ದುರಸ್ತಿ ಕಾರ್ಯ ಮಾಡಲಾಗುತ್ತಿದ್ದು, ಈ ವೇಳೆ ಹಾನಿಯಾಗಿದ್ದ ಪೈಪ್‌ಗಳನ್ನು ರಿಪೇರಿ ಮಾಡದೇ ಗ್ರಾಪಂ ಅಧಿಕಾರಿಗಳ‌ ನಿರ್ಲಕ್ಷದಿಂದ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಅಲ್ಲದೇ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದ ಎರಡು ನೀರಿನ ಸ್ಯಾಂಪಲ್ ಪೈಕಿ ಒಂದು ನೀರಿನ ಸ್ಯಾಂಪಲ್ ಕುಡಿಯಲು ಯೋಗ್ಯವಲ್ಲ ಎಂದು ಸಹ ವರದಿ ಬಂದಿದೆ. ಈ ಘಟನೆ ಕುರಿತಾಗಿ ಚರ್ಚಿಸಿ, ಜಾಗೃತಿ ಮೂಡಿಸಲು ಮತ್ತು ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ಮೂಡಿಸುವ ಸಲುವಾಗಿ ಗುರುವಾರದಂದು ಗ್ರಾಮದಲ್ಲಿ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿದೆ.

 

ಈಗಾಗಲೇ ಗ್ರಾಮದಲ್ಲಿ ತುರ್ತಾಗಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದಿದ್ದು, ಅಗತ್ಯವಿರುವ ಔಷಧಿ ದಾಸ್ತಾನು ಮಾಡಲಾಗಿದೆ. ಮನೆಗಳ ಕುಡಿಯುವ ನೀರಿನ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜನರಿಗೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪರ್ಯಾಯವಾಗಿ ಒದಗಿಸಿದ್ದಾರೆ. ನಾಗಸಮುದ್ರ ಗ್ರಾಮಕ್ಕೆ THO ಡಾ.ಮಧುಕುಮಾರ್ ಭೇಟಿ ‌ನೀಡಿ ಪರಿಶೀಲನೆ ನಡೆಸಿದ್ದು, ನಿರ್ಲಕ್ಷ ತೋರಿದ ಗ್ರಾಪಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ.

Recent Articles

spot_img

Related Stories

Share via
Copy link