ಸಮಾನ ನಾಗರಿಕ ಸಂಹಿತೆಯ ಬಗ್ಗೆ ಪರ ಮತ್ತು ವಿರೋಧ ಚರ್ಚೆಗಳು ದೇಶದಲ್ಲಿ ಜೋರಾಗಿಯೇ ನಡೆಯುತ್ತಿದೆ. ಈ ನಡುವೆಯೇ ಇಸ್ಲಾಂ ಧರ್ಮದವರನ್ನು ಗಮನದಲ್ಲಿರಿಸಿಕೊಂಡು ಖಾಸಗಿ ವಾಹಿನಿಯೊಂದು ಇಪ್ಪತೈದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದ್ದು, ಆ ಸಮೀಕ್ಷೆಯ ವರದಿಯಲ್ಲಿ 82% ಗಳಷ್ಟು ಮಹಿಳೆಯರು ತಮಗೂ ಪುರುಷರಿಗೆ ಸರಿಸಮನಾದ ಹಕ್ಕುಗಳು ಬೇಕು ಎಂಬುದಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಸಮೀಕ್ಷೆಯಲ್ಲಿ ಇಸ್ಲಾಂ ಸಮುದಾಯದ 8032 ರಷ್ಟು ಮಹಿಳೆಯರು ಭಾಗವಹಿಸಿದ್ದು, ಅವರಲ್ಲಿ 82% ಮಹಿಳೆಯರು ತಮಗೂ ಸಹ ಎಲ್ಲಾ ವಿಚಾರಗಳಲ್ಲಿಯೂ ಪುರುಷರಿಗೆ ದೊರೆಯುವಷ್ಟೇ ಹಕ್ಕುಗಳು ದೊರೆಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿವಾಹ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರ ಮೊದಲಾದಂತೆ ಇನ್ನಿತರ ವಿಷಯಗಳಲ್ಲಿ ಪುರುಷರಿಗೆ ಯಾವ ಹಕ್ಕನ್ನು ನೀಡಲಾಗಿದೆಯೋ, ಪುರುಷರು ಯಾವ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆಯೋ ಅದೇ ರೀತಿಯ ಸ್ವಾತಂತ್ರ್ಯ, ಹಕ್ಕುಗಳು ಇಸ್ಲಾಂ ಸಮುದಾಯದ ಮಹಿಳೆಯರಿಗೂ ದೊರೆಯುವಂತಾಗಬೇಕು ಎನ್ನುವ ಮೂಲಕ, ಪರೋಕ್ಷವಾಗಿ ಏಕರೂಪ ನಾಗರಿಕ ಸಂಹಿತೆ ಕಾನೂನನ್ನು ಬೆಂಬಲಿಸಿದ್ದಾರೆ.
ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ಹಾಗೆ ಮುಸ್ಲಿಂ ಸಮುದಾಯದ ಮಹಿಳೆಯರ ಉದ್ದೇಶವನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಖಾಸಗಿ ವಾಹಿನಿ ಈ ಸಮೀಕ್ಷೆ ನಡೆಸಿತ್ತು. ಹದಿನೆಂಟರಿಂದ ಅರವತ್ತೈದು ವರ್ಷದ ಮಹಿಳೆಯರನ್ನು ಗುರಿಯಾಗಿಸಿ ಈ ಸಮೀಕ್ಷೆ ನಡೆಸಲಾಗಿದೆ. ಶಿಕ್ಷಣ, ಮದುವೆ ಮತ್ತು ಸಮುದಾಯದ ಇತರ ವಿಷಯಗಳನ್ನು ಕೇಂದ್ರೀಕರಿಸಿ ಈ ಸಮೀಕ್ಷೆ ನಡೆಸಲಾಗಿದೆ.
ಇದರಲ್ಲಿ ಮಹಿಳೆಯರಿಗೂ ಆಸ್ತಿ ಹಕ್ಕಿನಲ್ಲಿ ಪುರುಷರಿಗೆ ಸಮನಾಗಿಯೇ ಹಕ್ಕುಗಳು ದೊರೆಯುವಂತಾಗಬೇಕು. ಆಸ್ತಿಯ ಉತ್ತರಾಧಿಕಾರ, ಪಿತ್ರಾರ್ಜಿತ ಆಸ್ತಿಯಲ್ಲಿ ಪುರುಷರಿಗೆ ಸಮನಾದ ಹಕ್ಕುಗಳು ಲಭಿಸಬೇಕು. ಪದವೀಧರ ಶಿಕ್ಷಣ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದ ಮಹಿಳೆಯರಲ್ಲಿ 86% ದಷ್ಟು ಮಹಿಳೆಯರು ಪುರುಷರಿಗೆ ಸಮನಾದ ಹಕ್ಕಿನ ಪರವಾದ ಒಲವನ್ನು ಹೊಂದಿರುವುದು ಈ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಹದಿನೆಂಟರಿಂದ ನಲವತ್ತ ನಾಲ್ಕು ವರ್ಷದ ಮಹಿಳೆಯರೇ ಸಮಾನ ಹಕ್ಕಿನ ಪರ ಹೆಚ್ಚಿನ ಒಲವು ಹೊಂದಿದ್ದಾರೆ ಎನ್ನುವುದು ಸಂತಸದ ವಿಷಯ.
ಪಿತ್ರಾರ್ಜಿತವಾದ ಹಕ್ಕುಗಳು ಮತ್ತು ಸಮಾನ ಉತ್ತರಾಧಿಕಾರಕ್ಕೆ ಸಂಬಂಧಿಸಿದ ಹಾಗೆ ಮುಸ್ಲಿಂ ಮಹಿಳೆಯರು ಏಕರೂಪದ ನಾಗರಿಕ ಸಂಹಿತೆಯ ಅಗತ್ಯತೆಗೆ ಬೆಂಬಲಿಸಿದ್ದಾರೆ. ಈ ಅಂಶ ಇಸ್ಲಾಂ ಸಮುದಾಯದ ಸುಶಿಕ್ಷಿತ ಮಹಿಳೆಯರು ಲಿಂಗ ತಾರತಮ್ಯ ಸೇರಿದಂತೆ ಆ ಸಮುದಾಯದಲ್ಲಿ ರೂಢಿಗತವಾಗಿರುವ ಇನ್ನಿತರ ತಾರತಮ್ಯ ನೀತಿಗಳನ್ನು ಪ್ರಶ್ನಿಸುವ ಮಟ್ಟಕ್ಕೆ ಜಾಗೃತರಾಗಿದ್ದಾರೆ. ಅವರಿಗೂ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
