ಜಾತ್ಯಾತೀತ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷ ಜಾತಿ ಜಾತಿಗಳ ನಡುವೆಯೇ ತಾರತಮ್ಯ ನೀತಿ ಅನುಸರಿಸಿ ರಾಜ್ಯದ ಜನರನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ.
ಬಡವರ ಉದ್ದಾರವೇ ನಮ್ಮ ಧ್ಯೇಯ ಎಂಬುದಾಗಿ ಪುಂಗಿ ಊದುವ ಕಾಂಗ್ರೆಸ್ ಪಕ್ಷ ರಾಜ್ಯದ ಎಲ್ಲಾ ಬಡ ವರ್ಗದ ಜನರನ್ನೂ ಸಮಭಾವದಿಂದ ನೋಡಿಕೊಳ್ಳುತ್ತಿಲ್ಲ ಎನ್ನುವುದಕ್ಕೆ ಪುಷ್ಟಿ ನೀಡುವಂತೆ ಸಾಕ್ಷಿಯೊಂದು ದೊರೆತಿದೆ. ರಾಜ್ಯದ ಎಸ್.ಸಿ., ಎಸ್.ಟಿ. ವರ್ಗದ ಗುತ್ತಿಗೆದಾರರಿಗೆ ಟೆಂಡರ್ ಮಿತಿಯನ್ನು ಹೆಚ್ಚಳ ಮಾಡಲಾಗಿದ್ದು, ಒಂದು ಕೋಟಿ ರೂ. ವರೆಗಿನ ಎಲ್ಲಾ ಕಾಮಗಾರಿಯಲ್ಲಿಯೂ ಮೀಸಲಾತಿ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಐವತ್ತು ಲಕ್ಷ ದಿಂದ ಒಂದು ಕೋಟಿಗೆ ಈ ಟೆಂಡರ್ ಮಿತಿ ಏರಿಸಿರುವುದಾಗಿಯೂ ಸರ್ಕಾರ ಮಾಹಿತಿ ನೀಡಿದೆ.
ಇದು ಒಂದು ಸುದ್ದಿಯಾದರೆ, ಎಸ್.ಸಿ., ಎಸ್.ಟಿ. ಹಾಸ್ಟೆಲ್ಗಳಲ್ಲಿ ನಿಂತು ತಮ್ಮ ವಿದ್ಯಾಭ್ಯಾಸ ನೋಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಸೋನಂ ಮಸೂರಿ ಅಕ್ಕಿಯ ಅನ್ನ ನೀಡುವಂತೆಯೂ ರಾಜ್ಯದ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ರಾಜ್ಯದಲ್ಲಿ ಎಲ್ಲಾ ವರ್ಗದ ಬಡ ವಿದ್ಯಾರ್ಥಿಗಳು ಸಹ ಸರ್ಕಾರಿ ಹಾಸ್ಟೆಲ್ಗಳಲ್ಲಿ ನಿಂತು ಅಧ್ಯಯನ ನಡೆಸುತ್ತಿದ್ದಾರೆ. ಸರ್ಕಾರಿ ವಿದ್ಯಾಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಆದರೂ ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಹಾಸ್ಟೆಲ್ನಲ್ಲಿ ಮಾತ್ರವೇ ಉತ್ತಮ ಗುಣಮಟ್ಟದ ಆಹಾರ ನೀಡಲು ಹೊರಟ ಸರ್ಕಾರದ ಕ್ರಮ ತಪ್ಪು.
ಇಲ್ಲಿ ಎಸ್.ಸಿ., ಎಸ್.ಟಿ. ವರ್ಗದವರಿಗೆ ಈ ರೀತಿಯಾದ ಅನುಕೂಲಗಳನ್ನು ಒದಗಿಸಿ ಕೊಟ್ಟ ಸರ್ಕಾರದ ನಿಲುವಿನ ಬಗ್ಗೆ ಚಕಾರ ಎತ್ತುತ್ತಿಲ್ಲ. ಬದಲಾಗಿ ನ್ಯಾಯ ಎಲ್ಲರಿಗೂ ಸಮನಾಗಿರಬೇಕು. ಯಾರಿಗೋ ಒಬ್ಬರಿಗೆ ಅವಕಾಶಗಳನ್ನು ಸೃಷ್ಟಿಸಿಕೊಡುವ ಆವೇಶದಲ್ಲಿ ಇತರ ಅವಕಾಶ ವಂಚಿತ ಜನರಿಗೆ ಮೋಸ ಮಾಡಿದಂತೆ ಆಗಬಾರದು ಎನ್ನುವುದನ್ನು ಉದ್ದೇಶವಷ್ಟೇ. ಏಕೆಂದರೆ ಗುತೇತಿಗೆದಾರರಾದವರ ವರ್ಗ ಯಾವುದೇ ಇರಲಿ, ಅವರೆಲ್ಲರೂ ಒಂದು ಮಟ್ಟಿನಲ್ಲಿ ತಮ್ಮ ಜೀವನ ನಿರ್ವಹಣೆಯ ಅಗತ್ಯತೆಗಳನ್ನು ಪೂರೈಸಿಕೊಂಡವರೇ ಆಗಿರುತ್ತಾರೆ. ತೀರಾ ಬಡ ಅಥವಾ ಸಾಮಾನ್ಯರ ಜೀವನಮಟ್ಟಕ್ಕಿಂತ ಸುಧಾರಿತ ಬದುಕನ್ನು ನಡೆಸುವವರೇ ಆಗಿರುತ್ತಾರೆ. ಹೀಗಿರುವಾಗ ಅವರಲ್ಲಿ ತಾರತಮ್ಯ ಧೋರಣೆಗಳನ್ನು ಸೃಷ್ಟಿಸುವ ಸಲುವಾಗಿ ಕಾಮಗಾರಿಗಳಲ್ಲಿಯೂ ಕೇವಲ ಎರಡು ವರ್ಗಕ್ಕೆ ಮಾತ್ರ ಮೀಸಲಾತಿ ನೀಡುವ ಸರ್ಕಾರದ ನಿಲುವು ಎಷ್ಟು ಸರಿ?. ಆ ಮೀಸಲಾತಿಯನ್ನು ಎಲ್ಲಾ ಗುತ್ತಿಗೆದಾರರಿಗೂ ವಿಸ್ತರಣೆ ಮಾಡಿದಲ್ಲಿ ಅಥವಾ ಇಂತಹ ಒಂದು ಅನಗತ್ಯ ನೀತಿಯನ್ನು ಜಾರಿಗೊಳಿಸಿ, ಸಮಾಜದಲ್ಲಿ ವರ್ಗ ಬೇಧ ರೂಪಿಸುವ ಕಾಂಗ್ರೆಸ್ ಸರ್ಕಾರ ಒಡೆದಾಳುವ ನೀತಿಯನ್ನು ಪ್ರೋತ್ಸಾಹಿಸುತ್ತಿದೆಯೇ ಎನ್ನುವ ಸಂಶಯ ಎಲ್ಲರದು.
ಇನ್ನು ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಹಾಸ್ಟೆಲ್ಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡಲು ಹೊರ ಟಿ ಕುಲ ಸರ್ಕಾರ, ಎಲ್ಲಾ ವರ್ಗದ ವಿದ್ಯಾರ್ಥಿಗಳೂ ನಿಲ್ಲುವ ಸರ್ಕಾರಿ ಹಾಸ್ಟೆಲ್ಗಳಲ್ಲಿಯೂ ಉತ್ತಮ ಗುಣಮಟ್ಟದ ಅಂದರೆ ಈಗಾಗಲೇ ಎಸ್.ಸಿ., ಎಸ್.ಟಿ. ಹಾಸ್ಟೆಲ್ಗಳಲ್ಲಿ ಬಳಕೆ ಮಾಡಲು ಸೂಚಿಸಿರುವ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನೇ ಉಪಯೋಗಿಸುವುದಕ್ಕೆ ಸೂಚಿಸಬಹುದಲ್ಲವೇ. ವಿದ್ಯಾರ್ಥಿಗಳು ಸಮಾಜದ ಆಸ್ತಿ. ಮುಂದೆ ದೇಶ ನಡೆಯಬೇಕಾಗಿರುವುದು ಅವರಿಂದಲೇ. ಹೀಗಿರುವಾಗ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ಕಾಳಜಿ ವಹಿಸಬೇಕಾದ ಜವಾಬ್ದಾರಿ ಸರ್ಕಾರದ್ದೇ.
ಆದ್ದರಿಂದ ಸದ್ಯ ಕೇವಲ ಎಸ್.ಸಿ., ಎಸ್.ಟಿ. ಗಳನ್ನಷ್ಟೇ ಗುರಿಯಾಗಿಸಿಕೊಂಡು ತಂದಿರುವ ನೀತಿಗಳನ್ನು ಸಮಾಜದ ಎಲ್ಲಾ ವರ್ಗಕ್ಕೂ ಅನ್ವಯವಾಗುವಂತೆ ಬದಲಾಯಿಸಿದಲ್ಲಿ ಉತ್ತಮ. ಹೀಗಾದಲ್ಲಿ ಜಾತ್ಯಾತೀತ ಪಕ್ಷ ಎನ್ನುವ ನಿಮ್ಮ ಬಾಯಿ ಮಾತಿಗೂ ಒಂದು ಅರ್ಥ ಬರುತ್ತದೆ. ಇಲ್ಲವಾದಲ್ಲಿ ಕಾಂಗ್ರೆಸ್ ಸರ್ಕಾರ ಕೇವಲ ಬೊಗಳೆ ಬಿಡುತ್ತದೆ ಎನ್ನುವ ಸಾರ್ವಜನಿರಕ ನಿಲುವು ನಿಜವಾಗುತ್ತದೆ.
ಒಡೆದಾಳುವ ನೀತಿ ಬಿಟ್ಟು, ಎಲ್ಲರಿಗೂ ಸಮಾನ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದಲ್ಲಿ ಉತ್ತಮ.
