ನವದೆಹಲಿ (ಜೂನ್ 3, 2023): ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ (ಐಸಿಜಿ) ಮತ್ತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್ಐ) ಜಂಟಿ ಕಾರ್ಯಾಚರಣೆಯಲ್ಲಿ ಭರ್ಜರಿ ಬೇಟೆ ಸಿಕ್ಕಿದೆ. ಅಂದರೆ, ಕೋಟ್ಯಂತರ ರೂ. ಮೌಲ್ಯದ ಚಿನ್ನವನ್ನು ಜಪ್ತಿ ಮಾಡಲಾಗಿದೆ.
ಡಿಆರ್ಐ 20 ಕೋಟಿ ರೂಪಾಯಿ ಮೌಲ್ಯದ ಸುಮಾರು 30 ಕ್ಕೂ ಅಧಿಕ ಕೆಜಿ ತೂಕದ ಚಿನ್ನವನ್ನು ಪ್ರತ್ಯೇಕವಾಗಿ ವಶಪಡಿಸಿಕೊಂಡಿದೆ. ಇಂಡಿಯನ್ ಕೋಸ್ಟ್ ಗಾರ್ಡ್ (ಐಸಿಜಿ) ಮತ್ತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ಜಂಟಿ ಕಾರ್ಯಾಚರಣೆಯಲ್ಲಿ ಮಂಡಪಂ ಮತ್ತು ರಾಮನಾಡ್ ಕಸ್ಟಮ್ಸ್ (Customs) ಬೆಂಬಲದೊಂದಿಗೆ ಈ ಭರ್ಜರಿ ಕಾರ್ಯಾಚರಣೆ ನಡೆಸಲಾಗಿದೆ. ತಮಿಳುನಾಡನ ಕರಾವಳಿ ಪ್ರದೇಶಗಳಲ್ಲಿ ಎರಡು ವಿಭಿನ್ನ ಜಪ್ತಿಗಳಲ್ಲಿ 20.21 ಕೋಟಿ ಮೌಲ್ಯದ 32.869 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಎರಡೂ ಪ್ರಕರಣಗಳಲ್ಲಿ ಚಿನ್ನವನ್ನು ಶ್ರೀಲಂಕಾದಿಂದ ಭಾರತಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದೂ ತಿಳಿದುಬಂದಿದೆ. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ನೀಡಿದ ಹೇಳಿಕೆಯ ಪ್ರಕಾರ, ರಾಮನಾಡಿನ ವೆಧಲೈ ಕರಾವಳಿಯ ಮೂಲಕ ವಿವಿಧ ಗ್ಯಾಂಗ್ಗಳು ಮೀನುಗಾರಿಕಾ ದೋಣಿಗಳನ್ನು ಬಳಸಿ ವಿದೇಶಿ ಮೂಲದ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಡಿಆರ್ಐನ ಚೆನ್ನೈ ಗುಪ್ತಚರ ವಿಭಾಗಕ್ಕೆ ಮಾಹಿತಿ ಸಿಕ್ಕಿದೆ. ಅದರಂತೆ, ಡಿಆರ್ಐ ಅಧಿಕಾರಿಗಳು ಐಸಿಜಿ ಸಹಾಯದಿಂದ ವ್ಯಾಪಕವಾದ ಕರಾವಳಿ ಕಣ್ಗಾವಲು ನಡೆಸಿದರು ಮತ್ತು ಶಂಕಿತ ಮೀನುಗಾರಿಕಾ ದೋಣಿಗಳನ್ನು ಗುರುತಿಸಿದರು ಎಂದೂ ತಿಳಿದುಬಂದಿದೆ.
ಶಂಕಿತ ಮೀನುಗಾರಿಕಾ ದೋಣಿಗಳಲ್ಲಿ ಒಂದನ್ನು ಡಿಆರ್ಐ ಮತ್ತು ಐಸಿಜೆ ಅಧಿಕಾರಿಗಳ ತಂಡವು ಮೇ 30 ರಂದು ಸಮುದ್ರದಲ್ಲಿ ಬೆನ್ನಟ್ಟಿದ ನಂತರ ತಡೆದಿತ್ತು ಎಂದೂ ವರದಿಯಾಗಿದೆ. “ಪ್ರತಿಬಂಧಿಸುವ ಸಮಯದಲ್ಲಿ, ಮೀನುಗಾರಿಕಾ ದೋಣಿಯಲ್ಲಿದ್ದ ವ್ಯಕ್ತಿಗಳು ನಿಷೇದಿತ ಪಾರ್ಸೆಲ್ ಅನ್ನು ಸಮುದ್ರಕ್ಕೆ ಎಸೆದರು. 7.13 ಕೋಟಿ ಮೌಲ್ಯದ 11.6 ಕೆಜಿ ವಿದೇಶಿ ಮೂಲದ ಚಿನ್ನವನ್ನು ಹೊಂದಿರುವ ನಿಷಿದ್ಧ ಪಾರ್ಸೆಲ್ ಅನ್ನು ಕೋಸ್ಟ್ ಗಾರ್ಡ್ ತಜ್ಞ ಚಾಲಕರ ಸಹಾಯದಿಂದ ಸಮುದ್ರತಳದಿಂದ ಹೊರತೆಗೆಯಲಾಯಿತು ಮತ್ತು ಕಳ್ಳಸಾಗಣೆಗೆ ಬಳಸಿದ ದೋಣಿಯೊಂದಿಗೆ ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅದೇ ದಿನ (ಮೇ 30) ಮತ್ತೊಂದು ದೋಣಿಯನ್ನು ಗುರುತಿಸಲಾಯಿತು ಮತ್ತು ಭಾರತೀಯ ಕಸ್ಟಮ್ಸ್ ಗಸ್ತು ದೋಣಿಯಲ್ಲಿದ್ದ DRI ಅಧಿಕಾರಿಗಳು ಶಂಕಿತ ಮೀನುಗಾರಿಕಾ ದೋಣಿಯನ್ನು ಸಮೀಪಿಸಿದಾಗ, ಕಳ್ಳಸಾಗಾಣಿಕೆದಾರರು ದಡದಲ್ಲಿ ಕಾಯುತ್ತಿದ್ದ ಇಬ್ಬರು ರಿಸೀವರ್ಗಳಿಗೆ ಪಾರ್ಸೆಲ್ ಹಸ್ತಾಂತರಿಸುತ್ತಿರುವುದನ್ನು ಅವರು ನೋಡಿದರು. ಕಸ್ಟಮ್ಸ್ ಬೋಟ್ ತಮ್ಮ ಕಡೆಗೆ ವೇಗವಾಗಿ ಬರುತ್ತಿರುವುದನ್ನು ಆರೋಪಿಗಳು ಕಂಡಾಗ, ರಿಸೀವರ್ಗಳು ಕಳ್ಳಸಾಗಣೆ ಮಾಡಿದ ಚಿನ್ನದೊಂದಿಗೆ ಕತ್ತಲೆಯಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಅಧಿಕಾರಿಗಳು ಹಿಡಿದಿದ್ದಾರೆ ಎಂದೂ ತಳಿದುಬಂದಿದೆ.
ವಿಚಾರಣೆಯ ಸಂದರ್ಭದಲ್ಲಿ, ಅವರಲ್ಲಿ ಒಬ್ಬರು ಹೊತ್ತೊಯ್ದ ಜಾಕೆಟ್ನಲ್ಲಿ ಎಂಟು ಪ್ಯಾಕೆಟ್ಗಳನ್ನು ಅಧಿಕಾರಿಗಳು ಪತ್ತೆ ಮಾಡಿದರು ಮತ್ತು ವಿವರವಾದ ಪರೀಕ್ಷೆಯ ನಂತರ ವ್ಯಕ್ತಿಗಳಿಂದ 13.08 ಕೋಟಿ ಮೌಲ್ಯದ 21.269 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲು ಕಾರಣವಾಯಿತು. ಅಲ್ಲದೆ, ಅಕ್ರಮ ಸಾಗಣೆಗೆ ಬಳಸುತ್ತಿದ್ದ ದೋಣಿ ಹಾಗೂ ದ್ವಿಚಕ್ರ ವಾಹನವನ್ನು ಸೀಜ್ ಮಾಡಲಾಗಿದೆ ಎಂದೂ ತಿಳಿದುಬಂದಿದೆ.
