ಒಡಿಶಾ ರೈಲು ದುರಂತ, ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಅಂತ್ಯ, ಭೀಕರ ಅಪಘಾತಕ್ಕೆ 261 ಬಲಿ!

ಬಾಲಾಸೋರ್(ಜೂ.03):  ಒಡಿಶಾದಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತ ಭಾರತದ ಇತಿಹಾಸದಲ್ಲೇ ನಡೆದ ಅತ್ಯಂತ ಭೀಕರ ಹಾಗೂ ಘನಘೋರ ದುರಂತವಾಗಿದೆ.  ನಿನ್ನೆ(ಜೂನ್ 2) ರಾತ್ರಿ  7 ಗಂಟೆ ಸುಮಾರಿಗೆ ಅಪಘಾತ ಮೂರು ರೈಲಿನ ನಡುವೆ ಅಪಘಾತ ನಡೆದಿದೆ. ಕೋರಮಂಡಲ್‌ ಎಕ್ಸ್‌ಪ್ರೆಸ್‌, ಬೈಯಪ್ಪನಹಳ್ಳಿ ಸರ್‌ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌-ಹೌರಾ ಎಕ್ಸ್‌ಪ್ರೆಸ್‌ ಮತ್ತು ಗೂಡ್ಸ್ ರೈಲುಗಳು ಅಪಘಾತಕ್ಕೀಡಾಗಿತ್ತು. ನಿನ್ನೆ ರಾತ್ರಿಯಿಂದ ಆರಂಭಗೊಂಡ ರಕ್ಷಣಾ ಕಾರ್ಯ ಇದೀಗ ಅಂತ್ಯಗೊಂಡಿದೆ. ಭೀಕರ ಅಪಘಾತದಲ್ಲಿ 261 ಮಂದಿ ಮೃತಪಟ್ಟಿದ್ದಾರೆ. ಇನ್ನು 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 300ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸತತ ಕಾರ್ಯಾಚರಣೆ ಹಾಗೂ ರಕ್ಷಣಾ ಕಾರ್ಯ ಅಂತ್ಯಗೊಂಡಿದೆ ಎಂದು ಕೇಂದ್ರ ರೈಲ್ವೇ ಸಚಿವಾಲಯ ಮಾಹಿತಿ ನೀಡಿದೆ. ಸದ್ಯ ರಕ್ಷಣಾ ಕಾರ್ಯ ಮುಗಿಸಿರುವ ತಂಡಗಳು ಇದೀಗ ಜೆಸಿಬಿ, ಕ್ರೇನ್ ಬಳಸಿ ರೈಲು ಬೋಗಿಗಳನ್ನು ಪಕ್ಕಕ್ಕೆ ಸರಿಸುವ ಕಾರ್ಯ ನಡೆಯುತ್ತಿದೆ. ಇದಾದ ಬಳಿಕ ರೈಲು ಹಳಿಗಳ ದುರಸ್ತಿ ಕಾರ್ಯಗಳು ನಡೆಯಲಿದೆ ಎಂದು ರೈಲ್ವೇ ಸಚಿವಾಯ ಹೇಳಿದೆ.

ಚೆನ್ನೈ ಕೊರೊಮಂಡಲ್ ಎಕ್ಸ್‌ಪ್ರೆಸ್ ರೈಲು ಹಾಗೂ ಯಶವಂತಪುರ ಹೌರ ರೈಲಿನ ಪ್ರಯಾಣಿಕರ ಬೈಕಿ 233 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. 30ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸಾಗಿಸುವ ಮಧ್ಯೆ ಅಸುನೀಗಿದ್ದಾರೆ. ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲು ಅಧಿಕಾರಿಗಳ ಜೊತೆ ಅಪಘಾತದ ಮಾಹಿತಿ ಪಡೆದುಕೊಂಡಿದ್ದಾರೆ. ಘಟನಾ ಸ್ಥಳದಿಂದ ಪ್ರಧಾನಿ ಮೋದಿ ದೂರವಾಣಿ ಮೂಲಕ ಎನ್‌ಡಿಆರ್‌ಎಫ್ ಹಾಗೂ ರಕ್ಷಣಾ ತಂಡಗಳ ಮುಖ್ಯಸ್ಥರ ಜೊತೆಗೆ ಮಾತನಾಡಿದ್ದಾರೆ. ಸುಮಾರು 40 ನಿಮಿಷಗಳ ಕಾಲ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಮೋದಿ, ಮಾಹಿತಿ ಪಡೆದುಕೊಂಡರು. ಬಳಿಕ ಕಟಕ್‌ಗೆ ತೆರಳಿದ್ದಾರೆ. ಆಸ್ಪತ್ರೆ ದಾಖಲಾಗಿರುವ ಗಾಯಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಗಾಯಾಳುಗಳಿಗೆ ಎಲ್ಲಾ ನೆರವು ನೀಡುವುದಾಗಿ ಮೋದಿ ಹೇಳಿದ್ದಾರೆ. ಧೈರ್ಯವಾಗಿರಿ, ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದಿದ್ದಾರೆ.

ಘಟನೆಯಲ್ಲಿ ಮಡಿದವರ ಕುಟಂಬಕ್ಕೆ 10 ಲಕ್ಷ ರೂಪಾಯಿ, ತೀವ್ರವಾಗಿ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ 50,000 ರೂಪಾಯಿ ಪರಿಹಾರವನ್ನು ರೈಲ್ವೇ ಸಚಿವಾಲಯ ಘೋಷಿಸಿದೆ. ಇನ್ನು ಎಲ್ಲಾ ಗಾಯಾಳುಗಳಿಗೆ ಅಗತ್ಯ ನೆರವನ್ನು ಸರ್ಕಾರ ನೀಡಲಿದೆ ಎಂದಿದ್ದಾರೆ.

Recent Articles

spot_img

Related Stories

Share via
Copy link