ಇಂದು ಸಂಜೆ 6.55ಕ್ಕೆ ಯುವ ರಾಜ್‌ಕುಮಾರ್ (Yuva Rajkumar) ನಟನೆಯ ಚೊಚ್ಚಲು ಸಿನಿಮಾದ ಟೈಟಲ್ ಟೀಸರ್ ಅನಾವರಣಗೊಳ್ಳುತ್ತಿದೆ. ಟೀಸರ್ ಬಿಡುಗಡೆ ಕ್ಷಣಗಣನೆಯ ಹೊತ್ತಿನಲ್ಲಿ ಚಿತ್ರದ ಟೈಟಲ್ (Title) ಏನಿರಬಹುದು ಎನ್ನುವ ಚರ್ಚೆ ಶುರುವಾಗಿದೆ. ಜೊತೆಗೆ ಎರಡು ಶೀರ್ಷಿಕೆಗಳು ಕೂಡ ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ. ಡಾ.ರಾಜ್‌ಕುಮಾರ್ ನಟನೆಯ ‘ಅಶ್ವಮೇಧ’ (Ashwamedha) ಅಥವಾ ‘ಜ್ವಾಲಾಮುಖಿ’ (Jwalamukhi) ಚಿತ್ರಗಳ ಹೆಸರನ್ನೇ ಯುವ ಸಿನಿಮಾಗೆ ಇಡಲಾಗಿದೆ ಎಂದು ಕೇಳಿ ಬರುತ್ತಿದೆ.

ಡಾ.ರಾಜ್ ಕುಟುಂಬದ ಅಭಿಮಾನಿಗಳು ಕೂಡ ಈ ಎರಡೂ ಹೆಸರಿನ ಪೋಸ್ಟರ್ ಗಳನ್ನು ತಮ್ಮದೇ ಆದ ರೀತಿಯಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಎರಡು ಶೀರ್ಷಿಕೆಗಳಲ್ಲಿ ಒಂದಂತೂ ಪಕ್ಕಾ ಎಂದೇ ಹೇಳಲಾಗುತ್ತಿದೆ. ಅಲ್ಲದೇ, ಜ್ವಾಲಮುಖಿಯೇ ಫಿಕ್ಸ್ ಆಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಸಹಜವಾಗಿಯೇ ಟೈಟಲ್ ಬಗ್ಗೆ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ. ಯಾವ ಟೈಟಲ್ ಅನ್ನು ಚಿತ್ರತಂಡ ಘೋಷಿಸಲಿದೆ ಎಂದು ಕಾದು ನೋಡಬೇಕಿದೆ.

ಈ ಹಿಂದೆ ಸಿನಿಮಾದ ಟೀಸರ್ ಮತ್ತು ಟೈಟಲ್ ಲಾಂಚ್ ಅನ್ನು ಪುನೀತ್ ರಾಜ್‌ಕುಮಾರ್ ಅವರ ಹುಟ್ಟು ಹಬ್ಬದಂದು ರಿಲೀಸ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಅಪ್ಪು ಹುಟ್ಟುಹಬ್ಬ 14 ದಿನ ಬಾಕಿ ಇರುವಾಗಲೇ ಇಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಕಾರಣ ಅಂದು ಪುನೀತ್ ಪತ್ನಿ ಅಶ್ವಿನಿ ಅವರು ಲಭ್ಯವಿಲ್ಲ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ. ಈ ಕಾರಣದಿಂದಾಗಿ ಶುಕ್ರವಾರ ಸಂಜೆ ಮುಹೂರ್ತ, ಟೈಟಲ್ ಮತ್ತು ಟೀಸರ್ ಲಾಂಚ್ ಮಾಡಲು ಸಂಸ್ಥೆ ಮುಂದೆ ಬಂದಿದೆಯಂತೆ.


