ಸಿದ್ದರಾಮಯ್ಯ – ರಾಗಾ ಪಾದಯಾತ್ರೆ 15ಕ್ಕೆ ಬಳ್ಳಾರಿ, 21-22ಕ್ಕೆ ರಾಯಚೂರಿಗೆ ಪ್ರವೇಶ.

ರಾಯಚೂರು(ಅ.11):  ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಪಾದಯಾತ್ರೆಯು ಇದೇ 15ಕ್ಕೆ ಬಳ್ಳಾರಿಗೆ ಆಗಮಿಸಲಿದ್ದು, ಅಲ್ಲಿಂದ 21-22ಕ್ಕೆ ರಾಯಚೂರಿನಲ್ಲಿ ಸಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಭಾರತ್‌ ಜೋಡೋ ನಿಮಿತ್ತ ನಗರದಲ್ಲಿ ನಡೆಸಿದ ಪೂರ್ವಭಾವಿ ಸಭೆಗಿಂತ ಮುಂಚೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಯು ಎಲ್ಲಿಯೂ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸಿಲ್ಲ. ಆದರೆ, ಬಳ್ಳಾರಿಯಲ್ಲಿ ಮಾತ್ರ 4 ಲಕ್ಷ ಜನರನ್ನು ಸೇರಿಸಿ ಸಮಾರಂಭ ಮಾಡಲಾಗುತ್ತಿದೆ. ಅಂದು ಮಧ್ಯಾಹ್ನ 1:30ಕ್ಕೆ ಬಳ್ಳಾರಿಗೆ ಪಾದಯಾತ್ರೆ ತಲುಪಲಿದ್ದು, ಅಲ್ಲಿ ಬೃಹತ್‌ ಸಮಾವೇಶ ಮಾಡಲಾಗುತ್ತದೆ. 16 ರಂದು ರಾಜ್ಯದಲ್ಲಿ ಪಾದಯಾತ್ರೆ ಸಾಗಿ ನಂತರ ಆಂಧ್ರಕ್ಕೆ ಹೋಗಿ ಮಂತ್ರಾಲಯದ ಮುಖಾಂತರ ಅ.21ಕ್ಕೆ ರಾಯಚೂರಿಗೆ ಬಂದು 22ಕ್ಕೆ ತೆಲಂಗಾಣವನ್ನು ಪ್ರವೇಶಿಸುತ್ತಿದೆ ಎಂದರು.

ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್‌ ಐತಿಹಾಸಿಕ ಪಾದಯಾತ್ರೆಯನ್ನು ನಡೆಸುತ್ತಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದುರಾಡಳಿತದ ಬಗ್ಗೆ ಜನರಿಗೆ ನೈಜ ವಿಚಾರಗಳನ್ನು ತಿಳಿಸುವ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಳೆದ ತಿಂಗಳು 7ರಿಂದ ಶುರುವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಯುತ್ತಿದೆ. 3750 ಕಿ.ಮೀ. ಉದ್ದದ 14 ರಾಜ್ಯಗಳಲ್ಲಿ ಪಾದಯಾತ್ರೆ ನಡೆಯಲಿದೆ. ಕರ್ನಾಟಕದಲ್ಲಿ 21 ದಿನ ಕಾಲ 510 ಕಿ.ಮೀ. ಪಾದಯಾತ್ರೆ ಮಾಡಲಿದ್ದಾರೆ. ಎಲ್ಲೂ ಬಹಿರಂಗ ಸಮಾವೇಶ ಮಾಡುವುದಿಲ್ಲ. ಬಳ್ಳಾರಿಯಲ್ಲಿ ಮಾತ್ರ ಒಂದು ಸಮಾವೇಶ ಮಾಡಲಾಗುತ್ತದೆ ಎಂದು ವಿವರಿಸಿದರು.

ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ಸೋತಿದೆ. ಅಗತ್ಯ ವಸ್ತುಗಳ ಬೆಲೆ ಕೂಡ ಏರಿದೆ. ಜನರು ಬಳಸುವ ವಸ್ತುಗಳ ಮೇಲೆಲ್ಲಾ ಜಿಎಸ್‌ಟಿ ಹಾಕುತ್ತಿದ್ದಾರೆ. ನರೇಂದ್ರ ಮೋದಿ ನಾವು ಜಿಎಸ್‌ಟಿ ತರುತ್ತೇವೆ ಅಂದಾಗ ವಿರೋಧ ಮಾಡಿದ್ದರು. ಮಂಡಕ್ಕಿ ಅದಾನಿ, ಅಂಬಾನಿ ಬೆಳೆಸುತ್ತಾರಾ? ಅದಾನಿ ಈಗ ಜಗತ್ತಿನ ಎರಡನೇ ಅತಿ ದೊಡ್ಡ ಶ್ರೀಮಂತನಾಗಿದ್ದು, ಮೋದಿ ಪ್ರಧಾನಿಯಾದ ಮೇಲೆಯೇ ಇದು ಸಾಧ್ಯವಾಗಿದೆ ಎಂದು ಟೀಕಿಸಿದರು.

ಮುಲಾಯಂ ಸಿಂಗ್‌ಗೆ ಸಂತಾಪ

ಮುಲಾಯಂ ಸಿಂಗ್‌ ಯಾದವ್‌ ಅಗಲಿಕೆ ಸಂತಾಪ ಸೂಚಿಸಿದ ಸಿದ್ದರಾಮಯ್ಯ ಅವರು, ಮುಲಾಯಂ ಸಿಂಗ್‌ ಯಾದವ್‌ ಹಿರಿಯ ರಾಜಕಾರಣಿ ಉತ್ತರ ಪ್ರದೇಶದಲ್ಲಿ ಸಿಎಂ ಆಗಿದ್ದವರು. ಅವರ ಮಗ ಅಖಿಲೇಶ್‌ ಸಿಎಂ ಆಗಿದ್ದರು. ಅವರದು ದೊಡ್ಡ ಕುಟುಂಬ ಅವರು ಹಿರಿಯ ಸಮಾಜವಾದಿ ಅವರ ಅಗಲಿಕೆಯಿಂದ ದೇಶಕ್ಕೆ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ನೋವು ಭರಿಸುವ ಶಕ್ತಿ ನೀಡಲಿ ಎಂದು ಸಿದ್ದರಾಮಯ್ಯ ಸಂತಾಪ ಸೂಚಿಸಿದರು.

Recent Articles

spot_img

Related Stories

Share via
Copy link