ಜಮಖಂಡಿ16 : ಕೃಷ್ಣೆ, ಕಾವೇರಿ, ತುಂಗಾನದಿಗಳು ನಮ್ಮ ಜೀವತಾಯಿಗಳು, ಆ ತಾಯಿ ಎಲ್ಲಿಯವರೆಗೆ ಹರಿಯುತ್ತಾಳೆ ಅಲ್ಲಿಯವರೆಗೆ ಪ್ರತಿನಿತ್ಯ ಆರತಿಯಾಗಬೇಕು ಆ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಹೇಳಿದರು.

ತಾಲ್ಲೂಕಿನ ಹಿಪ್ಪರಗಿ ಗ್ರಾಮದ ಉತ್ತರವಾಹಿನಿ ಕೃಷ್ಣಾ ತೀರದಲ್ಲಿ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಎಂ.ಆರ್.ಎನ್ ನಿರಾಣಿ ಫೌಂಡೇಶನ ಹಾಗೂ ರೈತರ ನೇತೃತ್ವದಲ್ಲಿ ಮಾಜಿ ಸಚಿವ ಮುರಗೇಶ ನಿರಾಣಿಯವರ 60ನೇ ವರ್ಷದ ಶಷ್ಠಿಪುರ್ತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕುಂಭಮೇಳ, ಕೃಷ್ಣಾ ಪುಣ್ಯಸ್ನಾನ, ಕೃಷ್ಣಾ ಆರತಿ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದರು.
ಪ್ರಯಾಗರಾಜ ಹೋಗದೆ ಇರುವ ನಮ್ಮ ಭಾಗದ ಜನರಿಗೆ ನೋಡಲು ಅಗೋರಿಗಳನ್ನು ಕರೆಸಿ ಕೃಷ್ಣಾ ಪುಣ್ಯ ಸ್ನಾನ ಮಾಡಿಸಿ ಕೃಷ್ಣಾ ನದಿಗೆ ಪೂಜ್ಯ ಭಾವನೆ ಬರುವಂತೆ ಮಾಡಿರುವದು ಶ್ಲಾಘನಿಯ ಎಂದರು.
ಭೋವಿಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಮಾತನಾಡಿ ನದಿಯ ಬಗ್ಗೆ ನಿರಾಣಿಯವರ ಕುಟುಂಬ ಶ್ರಮಿಸುತ್ತಿದೆ, ಕಾಳಿ ನದಿ ಜೋಡನೆಗೆ ಶ್ರಮ ವಹಿಸಿ ಕಾಳಿ ನದಿ ನೀರು ಸಮುದ್ರ ಪಾಲಾಗದಂತೆ ಪ್ರಯತ್ನ ಮಾಡಿದ್ದಾರೆ, ಜನರನ್ನು ಬಲಿಷ್ಟ ಮಾಡುವದು, ಆರ್ಥಿಕವಾಗಿ ಮುಂದೆ ತರುವದು ನಾಯಕನ ಕೆಲಸವಾಗಬೇಕು ಎಂದರು.

ಹುಕ್ಕೇರಿ ಚಂದ್ರಶೇಖರ ಶ್ರೀಗಳು ಮಾತನಾಡಿ ನಾವು ನಮ್ಮ ನದಿ, ನೆಲ, ಹಾಗೂ ಸಂಸ್ಕೃತಿಯನ್ನು ಬಿಟ್ಟುಕೊಡಬಾರದು, ನದಿಯ ಸ್ವಚ್ಚತೆ ಬಗ್ಗೆ ಪ್ರತಿಯೊಬ್ಬರು ಶ್ರಮಿಸಬೇಕು, ಹಾಗೂ ಪ್ರತಿಯೊಬ್ಬರ ಜೀವನಾಡಿಯಾಗಿರುವ ನದಿಯನ್ನು ಪೂಜಿಸಬೇಕು ಎಂದರು.
ಪಂಚಮಸಾಲಿ ಮೂರನೇ ಪೀಠದ ಮಹಾದೇವ ಶಿವಾಚಾರ್ಯ ಶ್ರೀಗಳು, ಹಿಪ್ಪರಗಿ ಪ್ರಭುಜೀ ಬೆನ್ನಾಳ ಮಹಾರಾಜರು ಸೇರಿದಂತೆ ಇತರರು ಇದ್ದರು.

ದೇವಗಿರಿ ಬಾಬಾ ನೇತೃತ್ವದಲ್ಲಿ ಸುಮಾರು 60ಕ್ಕೂ ಅಧಿಕ ನಾಗಾಸಾಧುಗಳ ಜೊತೆಗೆ ಮುರಗೇಶ ನಿರಾಣಿ ಹಾಗೂ ಸಹೋದರರಾದ ಲಕ್ಮಣ ನಿರಾಣಿ, ಸಂಗಮೇಶ ನಿರಾಣಿ, ಹಣಮಂತ ನಿರಾಣಿ ಸಹ ಕುಟುಂಬ ಪರಿವಾರ ಸಮೇತ ಕೃಷ್ಣಾ ಪುಣ್ಯಸ್ನಾನ ಮಾಡಿದರು, ಹರಿಹರ ಪಂಚಮಸಲಿ ಪೀಠದ ವಚನಾನಂದ ಶ್ರೀಗಳ ನೇತೃತ್ವದಲ್ಲಿ ವೇದಘೋಷಗಳ ಸಹಿತ ಶಾಸ್ತ್ರೋಕ್ತವಾಗಿ ಮುರಗೇಶ ನಿರಾಣಿಯವರಿಗೆ ಪುಣ್ಯಸ್ನಾನದ ಸಂಕಲ್ಪ ಮಾಡಿಸಿ ಕೃಷ್ಣಾ ನದಿಯಲ್ಲಿ ಹಾಲು, ಮೊಸರು, ತುಪ್ಪ, ಜೇನುತುಪ್ಪ ಸಹಿತ ಅಭಿಷೇಕ ಸ್ನಾನ ಮಾಡಿಸಿದರು. ನಂತರ ಸಾಲಂಕೃತ ಮಂಟಪದಲ್ಲಿ ಭಸ್ಮ, ಅರಿಶಿನ, ಕುಂಕುಮ, ಗಂಧಸ್ನಾನ ಮಾಡಿಸಲಾಯಿತು.

ಹಿಪ್ಪರಗಿ ಗ್ರಾಮದ ಪ್ರವೇಶದ್ವಾರದಿಂದ ನಾಗಾಸಾದುಗಳನ್ನು ರಥಗಳಲ್ಲಿ, ಮುರಗೇಶ ನಿರಾಣಿ ತೆರೆದ ವಾಹಣದಲ್ಲಿ, ದೇವರ ಪಲ್ಲಕ್ಕಿಗಳು, 108 ಕುಂಭಹೊತ್ತ ಮಹಿಳೆಯರು, ಡೊಳ್ಳು, ಕರಡಿ ಮಜಲು ಸೇರಿದಂತೆ ಸಕಲ ವಾಧ್ಯ ಮೇಳಗಳೊಂದಿಗೆ ಸಂಗಮೇಶ್ವರ ಮಹಾರಾಜರ ಮಠದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಸಂಗಮೇಶ್ವರ ದೇವಸ್ಥಾನದ ಹತ್ತಿರ ಕ್ರೇನ್ ಮೂಲಕ ಶೇಬು ಹಾರವನ್ನು ಹಾಕಿ ಸ್ವಾಗತಿಸಿದರು.
ವಿಶೇಷ ಪೂಜೆ, ಹಣ್ಣು ಹಂಪಲು ವಿತರಣೆ: ಸಂಗಮೇಶ್ವರ ದೇವಸ್ಥಾನ ಸೇರಿದಂತೆ ಗ್ರಾಮದ ವಿವಿಧ ದೇವಸ್ಥಾನಗಳಲ್ಲಿ ಹಾಗೂ ತಾಲ್ಲೂಕಿನ ವಿವಿಧ ದೇವಸ್ಥಾನ ಸೇರಿದಂತೆ 500 ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದರು.
ಬಾಕ್ಸ: ಬೆಳಿಗ್ಗೆಯಿಂದ ಹಲವಾರು ಕಾರ್ಯಕ್ರಮಗಳಿಗೆ ಜಿಟಿ ಜಿಟಿ ಮಳೆ ಅಡ್ಡಿಯಾಗುತ್ತಿತ್ತು, ಮತ್ತೆ ಮಳೆ ನಿಂತ ಕೂಡಲೇ ಕಾರ್ಯಕ್ರಮಗಳು ಜರುಗಿದವು, ಕೆಲ ಕಾರ್ಯಕ್ರಮಗಳು ಮಳೆಯಲ್ಲಿಯೇ ನಡೆದವು.

