ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಒಂದಿಲ್ಲೊಂದು ವಿಚಾರದಲ್ಲಿ ಎಡವಟ್ಟು ಮಾಡಿಕೊಳ್ಳುವ ಮೂಲಕವೇ ಸುದ್ದಿಯಾಗುತ್ತಿರುವುದು ದುರಂತ.
ಭ್ರಷ್ಟಾಚಾರ, ಬೆಲೆ ಏರಿಕೆ, ತನ್ನ ಉಚಿತ ಭಾಗ್ಯಗಳ ಭರವಸೆ ಈಡೇರಿಸುವ ಸಲುವಾಗಿ ಸಾಮಾನ್ಯ ಜನರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ, ಈಗ ಇನ್ನೊಂದು ಎಡವಟ್ಟು ಮಾಡಿಕೊಳ್ಳುವ ಮೂಲಕ ಪೇಚಿಗೆ ಸಿಲುಕಿದೆ.
ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎಂಬ ಕೂಗು ಬಹುಕಾಲದಿಂದ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಆರೇಳು ವರ್ಷಗಳಿಂದ ನಿರಂತರ ಹೋರಾಟವೂ ನಡೆಯುತ್ತಿದೆ. ಈ ವಿಚಾರದಲ್ಲಿ ಸಿ ಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಡವಟ್ಟು ಕೆಲಸವೊಂದನ್ನು ಮಾಡುವ ಮೂಲಕ, ತನ್ನ ಸಾಮಾನ್ಯ ಜ್ಞಾನ ಏನು ಎಂಬುದನ್ನು ಸಮಾಜದ ಮುಂದಿಟ್ಟಿದೆ. ಆ ಮೂಲಕ ತನ್ನ ಮರ್ಯಾದೆಯನ್ನು ತಾನೇ ಹರಾಜು ಮಾಡಿಕೊಂಡಿದೆ.
ಬಾಗಲಕೋಟೆಗೆ 2014 – 15 ನೇ ಸಾಲಿನ ಬಜೆಟ್ನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆ ಮಾಡಲಾಗಿತ್ತು. ಆದರೆ ಅದು ಈ ವರೆಗೂ ಮಂಜೂರಾಗಿಲ್ಲ. ಜೊತೆಗೆ ಈ ನಿಟ್ಟಿನಲ್ಲಿ ಇದುವರೆಗೂ ಯಾವುದೇ ಹುದ್ದೆಯನ್ನು ಸಹ ಸೃಷ್ಟಿ ಮಾಡಲಾಗಿಲ್ಲ. ಈ ಸಂಬಂಧ ಹಲವಾರು ಹೋರಾಟಗಳು ನಡೆದರೂ, ಸ್ವತಃ ಬಾಗಲಕೋಟೆಯ ಶಾಸಕರೇ ನೇತೃತ್ವ ವಹಿಸಿ, ಹಲವು ನಾಯಕರ ಜೊತೆಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು ಸಹ ಯಾವುದೇ ಉಪಯೋಗವಾಗಿಲ್ಲ. ಬಜೆಟ್ನಲ್ಲಿಯೂ ಇದಕ್ಕಾಗಿ ಯಾವುದೇ ಮೊತ್ತವನ್ನು ಘೋಷಣೆ ಮಾಡಿಲ್ಲ ಎಂಬುದು ದುರಂತ.
ಈ ಬಗ್ಗೆ ಸಾಕಷ್ಟು ಜನಾಕ್ರೋಶ ವ್ಯಕ್ತವಾದರೂ, ರಾಜ್ಯ ಸರ್ಕಾರ ಮಾತ್ರ ಏನೂ ಆಗೇ ಇಲ್ಲ ಎಂಬಂತೆ ನಿದ್ದೆ ಮಾಡುವ ನಟನೆಯಲ್ಲಿ ತೊಡಗಿದೆ. ಆದರೆ ಇನ್ನೂ ಮಂಜೂರಾಗದ ಕಾಲೇಜಿಗೆ, ಇಲ್ಲದ ಹುದ್ದೆಗೆ ಅಧಿಕಾರಿಯೊಬ್ಬರನ್ನು ನೇಮಕ ಮಾಡುವ ಮೂಲಕ ಸರ್ಕಾರ ಈಗ ನಗೆಪಾಟಿಲಿಗೀಡಾಗಿದೆ.
ಇನ್ನೂ ಮಂಜೂರಾಗದ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಾಗಲಕೋಟೆ ಇಲ್ಲಿಗೆ, ಇನ್ನೂ ಸೃಷ್ಟಿಯೇ ಆಗದ ಮುಖ್ಯ ಲೆಕ್ಕಾಧಿಕಾರಿ ಹುದ್ದೆಗೆ ಅಧಿಕಾರಿಯನ್ನು ನೇಮಕ ಮಾಡಿ ತನ್ನ ಜ್ಞಾನದ ಮಟ್ಟ ಇಷ್ಟೇ ಎಂಬುದನ್ನು ರಾಜ್ಯದ ಜನತೆಗೆ ಪರಿಚಯಿಸುವ ಕೆಲಸವನ್ನು ಕೈ ಸರ್ಕಾರ ಮಾಡಿದೆ. ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿಯಾಗಿರುವ ರವೀಂದ್ರ ಕೋಳೂರ ಎಂಬವರಿಗೆ ಭಡ್ತಿ ನೀಡಿ, ಇನ್ನೂ ಕಣ್ಣಿಗೆ ಕಾಣದ ಸಂಸ್ಥೆಗೆ ಸರ್ಕಾರ ವರ್ಗ ಮಾಡಿತ್ತು. ಅಂದ ಹಾಗೆ ಇಲ್ಲದ ಹುದ್ದೆಗೆ ಭಡ್ತಿ ಹೊಂದಿರುವ ಅಧಿಕಾರಿಗೂ ಸರ್ಕಾರದ ಈ ಕ್ರಮ ಹುಬ್ಬೇರಿಸುವ ಹಾಗೆ ಮಾಡಿದೆ ಎನ್ನುವುದು ಸತ್ಯ. ಹಾಗೆಯೇ ಈ ರೀತಿ ಪೇಚಿಗೆ ಸಿಲುಕಿರುವ ಅಧಿಕಾರಿ ಇನ್ನು ಮೂರೇ ದಿನದಲ್ಲಿ ನಿವೃತ್ತರಾಗಲಿದ್ದಾರೆ.
ಕಡೇ ಪಕ್ಷ ಹದಿನೈದು ದಿನಗಳ ಮುಂಚಿತವಾಗಿಯಾದರೂ ಸರ್ಕಾರ ಅವರಿಗೆ ಭಡ್ತಿ ನೀಡಿ, ಅವರ ಅರ್ಹತೆಯ ಹುದ್ದೆಗೆ ವರ್ಗಾವಣೆ ಮಾಡಿದ್ದರೆ ಆಗ ಅಧಿಕಾರಿಯೂ ಖುಷಿಯಾಗುತ್ತಿದ್ದರೇನೋ. ಆದರೆ, ಈಗ ಮೂರು ದಿನ ಮಾತ್ರ ಅಧಿಕಾರದಲ್ಲಿರಲಿರುವ, ಆ ಬಳಿಕ ನಿವೃತ್ತಿ ಹೊಂದಲಿರುವ ಅಧಿಕಾರಿಗೆ, ಮಂಜೂರಾಗದ ಸಂಸ್ಥೆಗೆ, ಇಲ್ಲದ ಹುದ್ದೆಗೆ ಭಡ್ತಿ ನೀಡಿ ವರ್ಗ ಮಾಡಿರುವ ಈ ಕ್ರಮ ಸಾರ್ವಜನಿಕ ವಲಯದಲ್ಲಿಯೂ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಚುನಾವಣಾ ಸಮಯದಲ್ಲಿ ಸಹ ಬಾಗಲಕೋಟೆಯ ವೈದ್ಯಕೀಯ ಕಾಲೇಜು ವಿಚಾರವನ್ನು ರಾಜಕೀಯ ದಾಳವಾಗಿ ಬಳಕೆ ಮಾಡಿಕೆೊಳ್ಳಲಾಗಿತ್ತು. ಈ ಬಗ್ಗೆ ಅಧಿಕಾರಿಯನ್ನು ನೇಮಕ ಮಾಡಿದಾಗ, ಇನ್ನಾದರೂ ಈ ಭಾಗದ ಜನರ ಕನಸು ನನಸಾಗುವ ಕಾಲ ಬಂತು ಎಂದು ಜನತೆ ಹರ್ಷ ವ್ಯಕ್ತಪಡಿಸಿದ್ದರು. ಆದರೆ ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಯಾವ ಪ್ರಕ್ರಿಯೆಯೂ ಆರಂಭವಾಗಿಲ್ಲ ಎಂಬ ಸುದ್ದಿ ಜನರಲ್ಲಿ ನಿರಾಸೆ ಮೂಡಿಸಿದೆ ಎಂಬುದು ಸತ್ಯ. ಹಾಗೆಯೇ, ಕಾಂಗ್ರೆಸ್ ಸರ್ಕಾರದ ಈ ಎಡವಟ್ಟಿನ ವಿರುದ್ಧ ಸಹ ಜನರು ಅಸಮಾಧಾನ ಹೊಂದುವಂತಾಗಿದೆ ಎನ್ನುವುದು ವಾಸ್ತವ.
ಒಟ್ಟಿನಲ್ಲಿ ಕೇವಲ ಘೋಷಣೆಗಷ್ಟೇ ಸೀಮಿತವಾದ, ಇನ್ನೂ ಮಂಜೂರಾಗದ, ಕಾರ್ಯರೂಪಕ್ಕೆ ಬಾರದ ಸಂಸ್ಥೆಗೆ, ಇನ್ನೂ ಸಹ ಸೃಷ್ಟಿಯೇ ಆಗದ ಹುದ್ದೆಗೆ ಅಧಿಕಾರಿಯನ್ನು ನೇಮಿಸಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಸಾಮಾನ್ಯ ಜ್ಞಾನವನ್ನೇ ಹೊಂದಿರದ ಕಾಂಗ್ರೆಸ್ ಸರ್ಕಾರದ ಇಂತಹ ನಿಲುವುಗಳೇ ಜನರ ಮುಂದೆ ಕಾಂಗ್ರೆಸ್ ಸರ್ಕಾರವನ್ನು ಬೆತ್ತಲಾಗಿಸುತ್ತಿದೆ ಎನ್ನುವುದು ಸತ್ಯ.
