ರಾಜ್ಯದ ಜನರನ್ನು ಮೋಸಗೊಳಿಸುವ ಕೆಲಸಕ್ಕೆ ಮತ್ತೊಮ್ಮೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ನಂದಿನಿ ಹಾಲಿನ ದರವನ್ನು ಮೂರು ರೂ. ಗಳಷ್ಟು ಏರಿಸುವ ಮೂಲಕ ಸರ್ಕಾರ ಮತ್ತೊಮ್ಮೆ ಕರುನಾಡ ಜನತೆಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ.
ಈ ಹಿಂದೆ ಅಂದರೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ನೀಡಿದ್ದ ಎಲ್ಲಾ ಭರವಸೆಗಳ ಈಡೇರಿಕೆಗಾಗಿ ರಾಜ್ಯದ ಜನರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿತ್ತು. ಆ ಮೂಲಕ ಮತ ಹಾಕಿದ ಮತದಾರರಿಗೆ ಅವರ ಆಯ್ಕೆ ತಪ್ಪು ಎಂಬುದನ್ನು ಸಹ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೆಲವೇ ದಿನಗಳಲ್ಲಿ ಸಾಧಿಸಿ ತೋರಿಸಿತ್ತು ಕಾಂಗ್ರೆಸ್. ದಿನ ಬಳಕೆಯ ವಸ್ತುಗಳ ಬೆಲೆ ಹೆಚ್ಚಳ, ವಿದ್ಯುತ್ ದರ ಹೆಚ್ಚಳ, ತರಕಾರಿ ಬೆಲೆ ಗಗನಮುಖಿಯಾಗಿಸುವ ಮೂಲಕವೂ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರನ್ನು ಕಂಗೆಡುವ ಹಾಗೆ ಮಾಡಿತ್ತು.
ಈಗ ದೈನಂದಿನ ಅಗತ್ಯತೆಯಾದ ನಂದಿನಿ ಹಾಲಿನ ದರವನ್ನು ಏರಿಸುವ ಮೂಲಕವೂ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಜೇಬು ಕತ್ತರಿಸುವ ಕೆಲಸಕ್ಕೆ ಮುಂದಾಗಿರುವುದು ಖೇದಕರ. ಈ ನಿರ್ಧಾರವನ್ನು ಕೆಎಂಎಫ್ ಅಧಿಕಾರಿಗಳ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು ನಡೆಸಿದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಹಾಲು ಒಕ್ಕೂಟದ ನಷ್ಟ ಸರಿದೂಗಿಸಲು ಸಲುವಾಗಿ ಬೆಲೆ ಏರಿಕೆ ಮಾಡಿರುವುದಾಗಿ ಮೂಲಗಳು ಮಾಹಿತಿ ನೀಡಿವೆ. ರೈತರಿಂದ ಖರೀದಿಸುವ ಹಾಲಿನ ಪ್ರತಿ ಲೀಟರ್‌ಗೆ ಮೂರು ರೂ. ಹೆಚ್ಚಳ ಮಾಡಲಾಗಿದೆ ಎಂಬುದಾಗಿಯೂ ತಿಳಿದು ಬಂದಿದೆ.
ಜೊತೆಗೆ ಆಗಸ್ಟ್ ಒಂದರಿಂದಲೇ ಜಾರಿಯಾಗುವ ಹಾಗೆ ಈ ಬೆಲೆ ಏರಿಕೆಯನ್ನು ಮಾಡಲಾಗಿದ್ದು, ಅಂದಿನಿಂದ ಜನಸಾಮಾನ್ಯರು ನಿತ್ಯ ನಂದಿನಿ ಹಾಲು ಖರೀದಿಗೂ ಹೆಚ್ಚುವರಿ ಹಣ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಸಿ, ತರಕಾರಿ ಬೆಲೆ ತುಟ್ಟಿಯಾಗಿರುವಾಗಲೇ, ಸರ್ಕಾರ ಹಾಲಿಗೂ ಬೆಲೆ ಏರಿಸಿದ್ದು, ಇದರಿಂದ ಜನಸಾಮಾನ್ಯರು ಪರದಾಡುವಂತಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಯೇ, ಈ ಬೆಲೆ ಏರಿಕೆಯಿಂದಾಗಿ ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ ಎನ್ನುವುದರಲ್ಲಿಯೂ ಎರಡು ಮಾತಿಲ್ಲ.
ಒಂದು ಕಡೆಯಲ್ಲಿ ರಾಜ್ಯದ ಬಹುಸಂಖ್ಯಾತ ವರ್ಗದ ಜನರನ್ನು ಸಂಪೂರ್ಣವಾಗಿ ಕಡೆಗಣಿಸಿ, ಅಲ್ಪಸಂಖ್ಯಾತರ ಓಲೈಕೆಯ ದೃಷ್ಟಿಯಿಂದ ಬಜೆಟ್‌ನಲ್ಲಿ ಎಲ್ಲಾ ರೀತಿಯ ಸೌಲಭ್ಯ, ಸೌಕರ್ಯಗಳನ್ನು ಅವರಿಗೆಯೇ ನೀಡುವ, ಅವರ ಉದ್ಧಾರದ ಹೆಸರಿನಲ್ಲಿ ಕೋಟಿ ಕೋಟಿ ವೆಚ್ಚ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಇತ್ತ ಬಹುಸಂಖ್ಯಾತ ಹಿಂದೂಗಳಿಂದ ತೆರಿಗೆ ಹಣವನ್ನು ಬಾಚಿ, ಅವರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿ, ಅತ್ತ ಅದೆಲ್ಲದರ ಲಾಭವನ್ನು ಕೇವಲ ಅಲ್ಪಸಂಖ್ಯಾತರಿಗೆ ಹಂಚುವ ಕೆಲಸವನ್ನು ಕಾಂಗ್ರೆಸ್ ಮಾಡಿದ್ದು, ಆ ಮೂಲಕ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಞೆಗೆ ಸುಣ್ಣ ಹಚ್ಚಿದೆ. ಇದರ ನಡುವೆ ಬೆಲೆ ಏರಿಕೆಯ ಬಿಸಿಯಲ್ಲಿಯೂ ನಾಡಿನ ಜನತೆ ಸಂಕಷ್ಟ ಅನುಭವಿಸುವಂತಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ.
ರಾಜ್ಯವನ್ನು, ರಾಜ್ಯದ ಜನತೆಯನ್ನು ಬೆಲೆ ಏರಿಕೆಯ ಮೂಲಕವೇ ಗುಡಿಸಿ ಗುಂಡಾಂತರ ಮಾಡುವ ಎಲ್ಲಾ ಕೆಲಸಕ್ಕೂ ರಾಜ್ಯದ ಕಾಂಗ್ರೆಸ್ ಸರ್ಕಾರ ಎಲ್ಲಾ ಯೋಜನೆಗಳನ್ನು ರೂಪಿಸಿಕೊಂಡಂತಿದೆ. ರಾಜ್ಯವನ್ನು ಬಿಕಾರಿ ಮಾಡಿಯಾದರೂ ತಮ್ಮ ಖಜಾನೆ ತುಂಬಿಸಿಕೊಳ್ಳಬೇಕು ಎನ್ನುವ ಹಾಗೆ ಭ್ರಷ್ಟ ಆಡಳಿತದ ಹಾದಿಯಲ್ಲಿರುವ ಕಾಂಗ್ರೆಸ್ ನಾಯಕರು, ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವುದು ಬಿಟ್ಟು, ಅವರನ್ನು ಮತ್ತಷ್ಟು ಕಷ್ಟದ ಕೂಪಕ್ಕೆ ತಳ್ಳುತ್ತಿರುವುದು ದುರಾದೃಷ್ಟಕರ.
ಮುಂದಿನ ಚುನಾವಣೆಯಲ್ಲಾದರೂ ಇಂತಹ ಭ್ರಷ್ಟ ಪಕ್ಷದ ಬಿಟ್ಟಿ ಆಮಿಷಗಳಿಗೆ ಮನಸೋಲದೆ, ಇಂತಹ ಸೋಗಲಾಡಿ ನಾಯಕರನ್ನು ಮನೆಗೆ ಕಳುಹಿಸೋಣ. ಆ ಮೂಲಕ ರಾಜ್ಯ, ಜನರನ್ನು ಇಂತಹ ಭ್ರಷ್ಟರ ಕೈಯಿಂದ ಕಾಪಾಡಿಕೊಳ್ಳುವತ್ತ ನಾವೆಲ್ಲರೂ ಒಗ್ಗೂಡುವಂತಾಗಲಿ ಎಂಬುದೇ ನಮ್ಮ ಆಶಯ.
