ಪ್ರಧಾನಿ ಮೋದಿ – ಮಣಿಪುರ ಘಟನೆಯಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

ಕಾಲ ಬದಲಾಗಿದೆ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಆದರೂ ಕೆಲ ಕಡೆಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮಾತ್ರ ಇನ್ನೂ ಮುಂದುವರಿಯುತ್ತಲೇ ಇದೆ. ಮಹಿಳೆಯರನ್ನು ಅಮಾನುಷವಾಗಿ ಬಳಸಿಕೊಳ್ಳುವುದು, ನಡೆಸಿಕೊಳ್ಳುವುದು ಸಹ ಸಮಾಜಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈಗ ಇಂತಹ ವಿಷಯದಲ್ಲಿ ಸುದ್ದಿಯಲ್ಲಿರುವುದು ಮಣಿಪುರ.

ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ, ಅವರನ್ನು ರಸ್ತೆಯಲ್ಲಿ ಬೆತ್ತಲೆ ಮೆರವಣಿಗೆ ನಡೆಸುವ ಮೂಲಕ ನಾಗರಿಕ ಸಮಾಜ ನಾಚಿಕೆ ಪಡುವಂತಹ ಅವಮಾನಕಾರಿ ಘಟನೆಗೆ ಮಣಿಪುರ ಸಾಕ್ಷಿಯಾಗಿರುವುದು ನಿಜಕ್ಕೂ ದುರಂತ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿದ್ದು, ಕೋಟ್ಯಂತರ ಭಾರತೀಯರ ಆಕ್ರೋಶಕ್ಕೂ ಕಾರಣವಾಗಿದೆ. ಇಂತಹ ದುರಂತ ಘಟನೆಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಗುರಿಯಾಗಿಸಬೇಕು ಎಂಬ ಕೂಗು ಸಹ ಎಲ್ಲೆಡೆಯಿಂದ ಕೇಳಿ ಬರುತ್ತಿದೆ.

ಈ ಸಂಬಂಧ ಪ್ರಧಾನಿ ಮೋದಿ ಅವರು ಮಾತನಾಡಿದ್ದು, ಮಣಿಪುರದಲ್ಲಿ ನಡೆದ ಈ ಮಹಿಳಾ ದೌರ್ಜನ್ಯವನ್ನು ಎಸಗಿದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅವರನ್ನು ತಪ್ಪಿಸಿಕೊಳ್ಳಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕಾನೂನು ತನ್ನ ಎಲ್ಲಾ ಶಕ್ತಿಗಳ ಜೊತೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿರುವುದಾಗಿ ಅವರು ಹೇಳಿದ್ದಾರೆ.

ಈ ಘಟನೆಯಿಂದ ನನ್ನ ಹೃದಯ ನೋವು ಮತ್ತು ಕೋಪದಿಂದ ತುಂಬಿದೆ. ಇಂತಹ ಘಟನೆಗಳು ನಾಗರಿಕ ಸಮಾಜವನ್ನೇ ತಲೆ ತಗ್ಗಿಸುವ ಹಾಗೆ ಮಾಡಿದ ಸಂಗತಿಯಾಗಿದೆ. ಇದು ನೂರಾರು ನಲವತ್ತು ಕೋಟಿ ಭಾರತೀಯರನ್ನು ನಾಚಿಕೆ ಪಡುವಂತೆ ಮಾಡಿದೆ. ಈ ದುರಂತಕ್ಕೆ ಸಾಕ್ಷಿಯಾದ ಆರೋಪಿಗಳನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಆಯಾಯ ರಾಜ್ಯದ ಕಾನೂನು, ಸುವ್ಯವಸ್ಥೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಹಾಗೆಯೂ ಅವರು ಸೂಚಿಸಿದ್ದಾರೆ.

ಹಾಗೆಯೇ ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಲ್ಲಿ ಓರ್ವ ಈ ಮಾನಗೇಡಿ ಕೃತ್ಯದ ಮಾಸ್ಟರ್ ಮೈಂಡ್ ಎಂದು ತಿಳಿದು ಬಂದಿದೆ. ಬಂಧಿತ ದುರುಳರ ವಿಚಾರಣೆ ನಡೆಯುತ್ತಿದ್ದು, ಇವರು ನೀಡುವ ಸುಳಿವನ್ನಾಧರಿಸಿ ಮತ್ತಷ್ಟು ಆರೋಪಿಗಳನ್ನು ವಶಕ್ಕೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಸಹ ಪ್ರತಿಕ್ರಿಯೆ ನೀಡಿದ್ದು, ಈ ಘಟನೆ ಮಾನವೀಯತೆಯ ವಿರುದ್ಧ ನಡೆದ ದುರಂತವಾಗಿದೆ. ಈ ಪ್ರಕರಣದಲ್ಲಿ ಭಾಗಿಗಳಾದ ಎಲ್ಲಾ ಆರೋಪಿಗಳಿಗೂ ಮರಣ ದಂಡನೆ ವಿಧಿಸುವಲ್ಲಿ ನಾವು ಪ್ರಯತ್ನ ಪಡುತ್ತೇವೆ. ವಿಡಿಯೋ ನೋಡಿದ ತಕ್ಷಣವೇ ಅದರ ಆಧಾರವನ್ನಿಟ್ಟುಕೊಂಡೇ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅವರು ಹೇಳಿದ್ದಾರೆ.

ಒಟ್ಟಿನಲ್ಲಿ ಮಹಿಳೆಯರು ಇಂದು ಎಲ್ಲಾ ವಿಚಾರಗಳಲ್ಲಿಯೂ ಸಬಲರಾಗಿದ್ದರೂ, ಕೆಲ ಕಡೆಗಳಲ್ಲಿ ಪುರುಷ ಪ್ರಧಾನ ಸಮಾಜ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿರುವುದು ನೋವಿನ ಸಂಗತಿ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಸೇರಿದಂತೆ ಇನ್ನಿತರ ರೀತಿಯಲ್ಲಿ ಮಹಿಳೆಯರನ್ನು ಗೋಳುಹೊಯ್ದುಕೊಳ್ಳುವವರ ವಿರುದ್ಧ ನಮ್ಮ ದೇಶದಲ್ಲಿ ಕಠಿಣ ಕಾನೂನು ರೂಪುಗೊಳ್ಳುವ ಅನಿವಾರ್ಯತೆ ಇಂದಿನ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ದೇಶದ ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಗಮನ ಹರಿಸುವಂತಾಗಲಿ ಎಂಬುದೇ ನಮ್ಮ ಆಶಯ.

Recent Articles

spot_img

Related Stories

Share via
Copy link