4 ದಿನಗಳ ಅಂತರದಲ್ಲಿ 2 ಪದಕ! ನೀರಜ್‌ ಚೋಪ್ರಾಗೆ ಡೈಮಂಡ್‌ ಲೀಗ್ ಬಳಿಕ ಗೋಲ್ಡನ್‌ ಕಿರೀಟ.

ನೀರಜ್‌ರ ಕೋಚ್‌ ಜಾನ್‌ ಜೆಲೆನ್ಜಿ ಇಲ್ಲಿ 9 ಬಾರಿ ಪ್ರಶಸ್ತಿ ಗೆದ್ದಿದ್ದರು. ನೀರಜ್‌ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಟ್ರೋಫಿ ಗೆದ್ದಿದ್ದಾರೆ. ಅವರು 3ನೇ ಪ್ರಯತ್ನದಲ್ಲಿ 85.29 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆದು ಅಗ್ರಸ್ಥಾನ ಪಡೆದುಕೊಂಡರು. ಮೊದಲ ಎಸೆತದಲ್ಲಿ ಫೌಲ್‌ ಮಾಡಿದ್ದ ನೀರಜ್‌, 2ನೇ ಪ್ರಯತ್ನದಲ್ಲಿ 83.45 ಮೀ. ದಾಖಲಿಸಿದರು. 4 ಮತ್ತು 5ನೇ ಪ್ರಯತ್ನದಲ್ಲಿ ಕ್ರಮವಾಗಿ 82.17 ಮೀ. ಹಾಗೂ 81.01 ಮೀ. ಎಸೆದ ಅವರ 6ನೇ ಎಸೆತ ಫೌಲ್‌ ಆಯಿತು.

ದಕ್ಷಿಣ ಆಫ್ರಿಕಾದ ಡೋವ್‌ ಸ್ಮಿತ್‌ 84.12 ಮೀಟರ್‌ನೊಂದಿಗೆ ಬೆಳ್ಳಿ, ಗ್ರೆನಡಾದ ಆ್ಯಂಡರ್‌ಸನ್‌ ಪೀಟರ್ಸ್‌ 83.63 ಮೀಟರ್‌ನೊಂದಿಗೆ ಕಂಚಿನ ಪದಕ ತಮ್ಮದಾಗಿಸಿಕೊಂಡರು.

4 ದಿನಗಳಲ್ಲಿ 2ನೇ ಕಿರೀಟ

ನೀರಜ್‌ ಜೂ.20ರಂದು ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ಅಗ್ರಸ್ಥಾನಿಯಾಗಿದ್ದರು. ಕೇವಲ 4 ದಿನಗಳ ಅಂತರದಲ್ಲಿ ಗೋಲ್ಡನ್‌ ಸ್ಪೈಕ್‌ನಲ್ಲಿ ಸ್ಪರ್ಧಿಸಿ ಚಾಂಪಿಯನ್‌ ಆಗಿದ್ದಾರೆ.

ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಪವನಾ ಬಂಗಾರದ ಗರಿ

ಪ್ರಯಾಗ್‌ರಾಜ್‌(ಉತ್ತರ ಪ್ರದೇಶ): ಇಲ್ಲಿ ನಡೆದ 3 ದಿನಗಳ 23ನೇ ರಾಷ್ಟ್ರೀಯ ಕಿರಿಯರ(ಅಂಡರ್‌-20) ಫೆಡರೇಷನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ 3 ಪದಕ ಗೆದ್ದಿದೆ.

ಕೂಟದ 2ನೇ ದಿನವಾಗಿದ್ದ ಸೋಮವಾರ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಪವನಾ ನಾಗರಾಜ್‌ 6.29 ಮೀ. ದೂರಕ್ಕೆ ಜಿಗಿದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಕೊನೆ ದಿನವಾದ ಮಂಗಳವಾರ ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ಅಪೂರ್ವ ಆನಂದ್‌ ನಾಯ್ಕ್‌ 1 ನಿಮಿಷ 01.92 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ, ಪುರುಷರ 400 ಮೀ. ಹರ್ಡಲ್ಸ್‌ನಲ್ಲಿ ಭೂಷ್‌ ಸುನಿಲ್‌ ಪಾಟೀಲ್‌ 52.21 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ತಮ್ಮದಾಗಿಸಿಕೊಂಡರು.

ರಾಷ್ಟ್ರೀಯ ಈಜು: ಮತ್ತೆ 9 ಪದಕ ಗೆದ್ದ ಕರ್ನಾಟಕ

ಭುವನೇಶ್ವರ(ಒಡಿಶಾ): 78ನೇ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಕರ್ನಾಟಕ ಮತ್ತೆ 9 ಪದಕ ಗೆದ್ದಿದೆ. ಒಟ್ಟಾರೆ ರಾಜ್ಯದ ಈಜುಪಟುಗಳು 3 ದಿನಗಳಲ್ಲಿ 23 ಪದಕ ಜಯಿಸಿದ್ದಾರೆ. ಸ್ಪರ್ಧೆ ಇನ್ನೂ 2 ದಿನಗಳ ಕಾಲ ನಡೆಯಲಿದೆ.

50 ಮೀ. ಬ್ಯಾಕ್‌ಸ್ಟ್ರೋಕ್‌ನ ಪುರುಷರ ವಿಭಾಗದಲ್ಲಿ ಶ್ರೀಹರಿ ನಟರಾಜು ಚಿನ್ನ, ಆಕಾಶ್‌ ಮಣಿ ಕಂಚು, ಮಹಿಳೆಯರ ವಿಭಾಗದಲ್ಲಿ ವಿಹಿತಾ ನಯನಾ ಚಿನ್ನ ಗೆದ್ದರು. ಮಹಿಳೆಯರ 50 ಮೀ. ಫ್ರೀಸ್ಟೈಲ್‌ನಲ್ಲಿ ರುಜುಲಾ ಚಿನ್ನ, ಧಿನಿಧಿ ದೇಸಿಂಘು ಕಂಚು, ಪುರುಷರ 200 ಮೀ. ಬಟರ್‌ಫ್ಲೈನಲ್ಲಿ ದರ್ಶನ್‌ ಕಂಚು, 400 ಮೀ. ಫ್ರೀಸ್ಟೈಲ್‌ನಲ್ಲಿ ಅನೀಶ್‌ ಗೌಡ ಕಂಚು, ಮಹಿಳೆಯರ 1500 ಮೀ. ಫ್ರೀಸ್ಟೈಲ್‌ನಲ್ಲಿ ತಾನ್ಯಾ ಷಡಕ್ಷರಿ ಕಂಚು ಗೆದ್ದರು. ಪುರುಷರ 4*100 ಮೆಡ್ಲೆ ಸ್ಪರ್ಧೆಯಲ್ಲಿ ಉತ್ಕರ್ಷ್‌, ಮಣಿಕಂಠ, ಚಿಂತನ್‌, ತನಿಶ್‌ ಜಾರ್ಜ್‌ ಇದ್ದ ತಂಡಕ್ಕೆ ಬೆಳ್ಳಿ ಲಭಿಸಿತು.

Recent Articles

spot_img

Related Stories

Share via
Copy link