ಜಮಖಂಡಿ: ಆಧ್ಯಾತ್ಮಿಕ, ಸಾಂಸ್ಕøತಿಕ, ರಾಜಕೀಯ, ಮನರಂಜನೆ, ಕಲೆ ಎಲ್ಲವನ್ನು ಪತ್ರಕರ್ತರು ಬಲ್ಲವರಾಗಿರುತ್ತಾರೆ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ದೃಷ್ಟಿಯಿಂದ ಸತ್ಯವನ್ನು ಸತ್ಯವಾದ ರೀತಿಯಲ್ಲಿ ದಿಟ್ಟತನದಿಂದ ಪತ್ರಿಕೆಗಳಲ್ಲಿ ಬರೆಯಬೇಕು ಎಂದು ಶಾಸಕ, ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಮಖಂಡಿ ಘಟಕದ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗದ ಜೊತೆಗೆ ಪತ್ರಿಕಾ ಮಾಧ್ಯಮವನ್ನು ನಾಲ್ಕನೆ ಅಂಗವಾಗಿ ಪರಿಗಣಿಸಲಾಗಿದೆ. ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಪತ್ರಕರ್ತರ ಪಾತ್ರ ದೊಡ್ಡದಾಗಿದೆ ಎಂದರು.
ಡಿವೈಎಸ್ಪಿ ಶಾಂತವೀರ ಈ ಮುಖ್ಯ ಅತಿಥಿಯಾಗಿ ಮಾತನಾಡಿ, ಪತ್ರಿಕಾರಂಗ ಶ್ರಮ ವಹಿಸಿ ಜವಾಬ್ದಾರಿಯಿಂದ ಕೆಲಸ ಮಾಡದಿದ್ದರೆ ಅನ್ಯಾಯ, ಅಧರ್ಮ, ಶೋಷಣೆ ನಿಲ್ಲಿಸಲು ಸಾಧ್ಯವಿಲ್ಲ. ಸರ್ಕಾರದ ಕಿವಿ ಹಿಂಡುವ ಹಾಗೂ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಪತ್ರಕರ್ತರು ನಿರಂತರವಾಗಿ ಮಾಡಬೇಕು ಎಂದರು.
ಮಹಾಲಿಂಗಪುರದ ಪತ್ರಕರ್ತ ಶಿವಲಿಂಗ ಸಿದ್ನಾಳ ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿ, ಸೈನಿಕರ ಗನ್, ಪತ್ರಕರ್ತರ ಪೆನ್ನು ಹಾಗೂ ರೈತರ ಬೆನ್ನು ಯಾವಾಗಲೂ ಸನ್ನದ್ಧ ಸ್ಥಿತಿಯಲ್ಲಿರಬೇಕು. ಪತ್ರಕರ್ತರು ಪೆನ್ನನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಸಮಾಜದ ಅಭಿವೃದ್ಧಿಗಾಗಿ ಹೋರಾಟ ಮಾಡಬೇಕು ಎಂದರು.
ಅಪ್ಪು ಪೋತರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ ಪತ್ರಕರ್ತರ ಕುಟುಂಬ ಬಹಳಷ್ಟು ಆರ್ಥಿಕವಾಗಿ ಬಲಿಷ್ಠರಲ್ಲ ಪತ್ರಕರ್ತರು ಯಾವುದಾದರೂ ಒಂದು ದುರ್ಘಟನೆಯಲ್ಲಿ ಮೃತರಾದರೆ ಅವರ ಕುಟುಂಬ ಬೀದಿಗೆ ಬರುತ್ತದೆ ಇಂತಹ ಸಾಕಷ್ಟು ಕುಟುಂಬಗಳು ಕಣ್ಣು ಮುಂದೆ ಇವೆ ಹಾಗಾಗಿ ನನ್ನ ಅವದಿಯಲ್ಲಿ ನಮ್ಮ ಪತ್ರಕರ್ತರಿಗೆ ಆರೋಗ್ಯ ವಿಮೆ ಜೊತೆಗೆ ಲೈಫ್ ರಿಸ್ಕ್ ವಿಮೆ ಮಾಡಿಸಲಾಗುವುದು ಇದರಿಂದಾಗಿ ಅವರ ಕುಟುಂಬದ ವರ್ಗದವರಿಗೆ ಒಳ್ಳೆಯದು ಆಗುತ್ತದೆ ಎಂದು ಹೇಳಿದರು.
ಕಾನಿಪ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ದಲಭಂಜನ್ ಮಾತನಾಡಿದರು. ಕಾನಿಪ ಜಮಖಂಡಿ ಘಟಕದ ಅಧ್ಯಕ್ಷ ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ತರುಣ ಭಾರತ ಪತ್ರಿಕೆಯ ಜಿಲ್ಲಾ ವರದಿಗಾರ ಮೋಹನ ಸಾವಂತ ಅವರಿಗೆ ದಿ.ಬಾಬುರಡ್ಡಿ ತುಂಗಳ ಸ್ಮರಣಾರ್ಥ ಕೊಡಮಾಡುವ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತ್ರಕರ್ತರ ಪ್ರತಿಭಾವಂತ ಮಕ್ಕಳಾದ ತುಪೇಲಅಹ್ಮದ ಕೊರತಿ, ತಾಹೀರ್‍ಹುಸೇನ್ ಕೊರತಿ, ತನ್ವೀರಅಹ್ಮದ ಕೊರತಿ, ಪ್ರಣವ ದುದಗಿ ಅವರ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಪತ್ರಿಕಾ ವಿತರಕರಾದ ರವಿ ಶೇಗಾಂವಿ, ರಮೇಶ ಮಾಂಗ, ಪವನ ಗೌಡರ, ವಿಜಯ ಮೈಗೂರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕಾನಿಪ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಮಹೇಶ ಅಂಗಡಿ, ಡಾ.ವಿಜಯಲಕ್ಷ್ಮಿ ತುಂಗಳ, ಶಂಕರ ಕಲ್ಯಾಣಿ ಯಮನೂರ ಮೂಲಂಗಿ ಉಪಸ್ಥಿತರಿದ್ದರು.
ರಕ್ಷಿತಾ ಕರಡಿ, ಮಲ್ಲು ನಾವಿ, ಶಿವಾಜಿ ಜಾಧವ ಪ್ರಾರ್ಥನೆ ಗೀತೆ ಹಾಡಿದರು. ಸಂಘದ ಗೌರವಾಧ್ಯಕ್ಷ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿದರು. ಕಾನಿಪ ಜಿಲ್ಲಾ ಘಟಕದ ಉಪಧ್ಯಕ್ಷ ಡಾ.ಮಲ್ಲಿಕಾರ್ಜುನ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು. ಸಂಘದ ಖಜಾಂಚಿ ಶಿವಾನಂದ ಕೊಣ್ಣೂರ ವಂದಿಸಿದರು.
ವಿಶೇಷವಾಗಿ ಆಚರಿಸಲಾದ ಪತ್ರಿಕಾ ದಿನಾಚರಣೆ
ಪತ್ರಿಕಾ ದಿನಾಚರಣೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯವರು ಉಚಿತ ಆರೋಗ್ಯ ತಪಾಸಣೆ ಮಾಡಿದರು ಸ್ಥಳದಲ್ಲಿ ರಕ್ತ ತಪಾಸಣೆ ಮೂಲಕ ಶುಗರ್ ಮತ್ತು ರಕ್ತ ಮಾದರಿ ಗುರತು ಹೇಳಿ ಔಷಧ ವಿತರಣೆ ಮಾಡಿದ್ದು ಒಂದು ಕಡೆ ಆದರೆ ಇನ್ನೊಂದು ಕಡೆ ಅರಣ್ಯ ಇಲಾಖೆಯವರು ವಿವಿಧ ತಳಿಯ ಹಣ್ಣಿನ ಸಸಿಗಳ ಮಾಹಿತಿ ನೀಡುತ್ತಾ ಉಚಿತವಾಗಿ ಸಸಿ ನೀಡುತ್ತಿರುವುದು ಎಲ್ಲರ ಗಮನ ಸೆಳೆಯಿತು.


