ಸತ್ಯಕಾಮರ ಜನ್ಮರಾಧನೆ : ಬನ್ನಂಜೆ ಗೋವಿಂದಾಚಾರ್ಯರ 90ನೇ ವಿಶ್ವ ನಮನ

ಸತ್ಯಕಾಮರ ಜನ್ಮರಾಧನೆ : ಬನ್ನಂಜೆ ಗೋವಿಂದಾಚಾರ್ಯರ 90ನೇ ವಿಶ್ವ ನಮನ ಅಂಗವಾಗಿ ‘ಗೋವಿಂದ ದರ್ಶನ’ ಜು.5ರಂದು ಕಲ್ಲಹಳ್ಳಿಯಲ್ಲಿ
ಜಮಖಂಡಿ, ಜೂ.30: ಸತ್ಯಕಾಮರ ಜನ್ಮರಾಧನೆ ಹಾಗೂ ಹಿರಿಯ ವಿದ್ವಾಂಸ, ವೇದ–ಉಪನಿಷತ್ ವ್ಯಾಖ್ಯಾನಕಾರ ಹಾಗೂ ಚಿಂತಕರಾದ ಬನ್ನಂಜೆ ಗೋವಿಂದಾಚಾರ್ಯರ 90ನೇ ವರ್ಷದ ಅಂಗವಾಗಿ ಜುಲೈ 5ರಂದು ಜಮಖಂಡಿ ತಾಲೂಕಿನ ಕಲ್ಲಹಳ್ಳಿಯ ಸತ್ಯಕಾಮ ಪ್ರತಿಷ್ಠಾನದ ಸಭಾಂಗಣದಲ್ಲಿ ಬೆಳಿಗ್ಗೆ 9.30ರಿಂದ ರಾತ್ರಿ ತನಕ ‘ಗೋವಿಂದ ದರ್ಶನ’ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಸಾಹಿತಿ ವೀಣಾ ಬನ್ನಂಜೆ ತಿಳಿಸಿದರು.
ತಾಲೂಕಿನ ಹುನ್ನೂರು ಗ್ರಾಮದ ಪತ್ರಕರ್ತರ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸತ್ಯಕಾಮರ ಜನ್ಮದಿನ ಅಕ್ಟೋಬರ್ 20ರಂದು ಇದ್ದರೂ, ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿವರ್ಷ ಜುಲೈ ತಿಂಗಳ ಮೊದಲ ಭಾನುವಾರ ಜನ್ಮಾರಾಧನೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಬಾರಿ ಜುಲೈ 5ರಂದು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಸತ್ಯಕಾಮ ಪ್ರತಿಷ್ಠಾನವು ಕಳೆದ ಹಲವು ವರ್ಷಗಳಿಂದ ಶಿವ ದರ್ಶನ, ಮಹಾವೀರ ದರ್ಶನ, ಬುದ್ಧ ದರ್ಶನ ಹಾಗೂ ಸಿದ್ದೇಶ್ವರ ದರ್ಶನ ಮೊದಲಾದ ವಿಚಾರ ಸಂಕಿರಣಗಳನ್ನು ಆಯೋಜಿಸಿ ವಿವಿಧ ಮಹನೀಯರ ತತ್ತ್ವ-ಚಿಂತನೆಗಳನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಿದೆ. ಇದೇ ಪರಂಪರೆಯಲ್ಲಿ ಈ ಬಾರಿ ‘ಗೋವಿಂದ ದರ್ಶನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಬನ್ನಂಜೆ ಗೋವಿಂದಾಚಾರ್ಯರ 90ನೇ ವರ್ಷದ ಅಂಗವಾಗಿ ಕಳೆದ ಒಂದು ವರ್ಷದಿಂದ ಕರ್ನಾಟಕದಾದ್ಯಂತ ಉಡುಪಿ, ಮಣಿಪಾಲ, ಮಂಗಳೂರು, ಮೂಡುಬಿದಿರೆ, ಸುಬ್ರಹ್ಮಣ್ಯ, ಪುತ್ತೂರು, ಮೈಸೂರು, ಚಿಕ್ಕಮಗಳೂರು, ಸಾಗರ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ಕಲಬುರಗಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಸ್ಥಳಗಳಲ್ಲಿ ‘ಬನ್ನಂಜೆ 90 ವಿಶ್ವನಮನ’ ಕಾರ್ಯಕ್ರಮಗಳು ನಡೆದಿವೆ. ಅಲ್ಲದೆ ಋಷಿಕೇಶದಲ್ಲಿ ಎಂಟು ದಿನಗಳ ವಿಶೇಷ ಕಾರ್ಯಕ್ರಮ ಹಾಗೂ ಅಮೆರಿಕದ ನ್ಯೂಜೆರ್ಸಿ, ಹ್ಯೂಸ್ಟನ್, ಫೀನಿಕ್ಸ್ ಸೇರಿದಂತೆ ನಾಲ್ಕು ನಗರಗಳಲ್ಲಿಯೂ ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಕಲ್ಲಹಳ್ಳಿಯ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀ ರಾಮಕೃಷ್ಣ ಮಠದ ಶ್ರೀ ಅಭಯಾನಂದ ಸ್ವಾಮೀಜಿ, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಕಾಸರಗೋಡು. ಗುರುರಾಜ ಕರ್ಜಗಿ, ಶಿಕ್ಷಣ ತಜ್ಞರು, ಬೆಂಗಳೂರು.ಬಿ. ಎಲ್. ಶಂಕರ್ ಅಧ್ಯಕ್ಷರು, ಚಿತ್ರಕಲಾ ಪರಿಷತ್, ಬೆಂಗಳೂರು.ಮಲ್ಲೇಪುರಂ ಜಿ ವೆಂಕಟೇಶ್, ಬೆಂಗಳೂರು.ನಿತ್ಯಾನಂದ ಪಡ್ರೆ, ಉಡುಪಿ.ಗ. ನಾ. ಭಟ್ಟರು, ಮೈಸೂರು. ಮನು ಬಳಿಗಾರ್, ಬೆಂಗಳೂರು. ವಿಕ್ರಮಾರ್ಜುನ ಹೆಗ್ಡೆ, ತಿಂಗಳೆ, ಉಡುಪಿ.ವಿಜಯ ಸಿಂಹ ಆಚಾರ್ಯರು, ಬೆಂಗಳೂರು.ರಮೇಶ್ ವಾಸುದೇವ ರಾವ್, ಬೆಂಗಳೂರು.ಶ್ರೀವತ್ಸ ಬಲ್ಲಾಳ್, ಅಮೆರಿಕ.ರೋಹಿತ್ ಚಕ್ರತೀರ್ಥ, ಬೆಂಗಳೂರು. ಈ ಎಲ್ಲ ವಿದ್ವಾಂಸರು ಬನ್ನಂಜೆ ಗೋವಿಂದಾಚಾರ್ಯರ ವ್ಯಕ್ತಿತ್ವ, ಪತ್ರಿಕೋದ್ಯಮ, ಸಾಹಿತ್ಯ, ಭಗವದ್ಗೀತೆ, ವೇದಚಿಂತನೆ, ಶಕ್ತಿಯಾರಾಧನೆ ಸೇರಿದಂತೆ ವಿವಿಧ ಆಯಾಮಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಕೊಪ್ಪಳದ ಗವಿಸಿದ್ದೇಶ್ವರ ಮಠದ ಶ್ರೀಗಳು ಆಶೀರ್ವಚನ ನೀಡಲಿದ್ದು, ದಿನವಿಡೀ ವಿಚಾರಗೋಷ್ಠಿಗಳು ನಡೆಯಲಿವೆ ಎಂದರು.
ಕಾರ್ಯಕ್ರಮದಲ್ಲಿ ಬನ್ನಂಜೆ ಗೋವಿಂದಾಚಾರ್ಯರ ಕವಿತೆಗಳ ಗಾಯನವನ್ನು ಸುಮಾ ಶಾಸ್ತ್ರಿ ಮತ್ತು ಕವಿತಾ ಉಡುಪ ಪ್ರಸ್ತುತಪಡಿಸಲಿದ್ದಾರೆ. ಜೊತೆಗೆ ಸುಚೇಂದ್ರ ಪ್ರಸಾದ ಮತ್ತು ತಂಡದಿಂದ ವೀಣಾ ಬನ್ನಂಜೆ ಅವರ ಕೃತಿ ‘ನನ್ನ ಪಿತಾಮಹ’ ಆಧಾರಿತ ನಾಟಕ ಪ್ರದರ್ಶನವೂ ಇರಲಿದೆ. ಗಾಯಕ ವಿದ್ಯಾಭೂಷಣ ಗಾಯಕಿ ಮೇಧಾ ವಿದ್ಯಾಭೂಷಣ ಅವರಿಂದ ಬನ್ನಂಜೆ ಅವರ ಕೃತಿಗಳ ಗಾಯನವೂ ವಿಶೇಷ ಆಕರ್ಷಣೆಯಾಗಲಿದೆ ಎಂದು ತಿಳಿಸಿದರು.
ಜುಲೈ 6ರಂದು ಬಾಗಲಕೋಟೆಯ ಚರಂತಿಮಠ ಅವರ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಸಂಜೆ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಸಹ ಬನ್ನಂಜೆ ಗೋವಿಂದಾಚಾರ್ಯರ ಕುರಿತು ಉಪನ್ಯಾಸ, ಸಂಗೀತ ಕಾರ್ಯಕ್ರಮ ಹಾಗೂ ‘ಪಿತಾಮಹ’ ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ಸತ್ಯಕಾಮರು ಮತ್ತು ಬನ್ನಂಜೆ ಗೋವಿಂದಾಚಾರ್ಯರ ನಡುವಿನ ಅಪೂರ್ವ ಸ್ನೇಹ, ಪರಸ್ಪರ ಗೌರವ ಮತ್ತು ವೈಚಾರಿಕ ಪರಂಪರೆಯನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ವೀಣಾ ಬನ್ನಂಜೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಆರ್.ಪಿ. ನೇಮಗೌಡ,ಪವನ ಶಹಾಪುರ,ಸಂಜಯ ಮಲಘಾಣ ಮತ್ತು ವಿವೇಕಾನಂದ ಮಠಪತಿ ಉಪಸ್ಥಿತರಿದ್ದರು.
ಫೋಟೋ ಶೀರ್ಷಿಕೆ:
ತಾಲೂಕಿನ ಹುನ್ನೂರು ಗ್ರಾಮದ ಪತ್ರಕರ್ತರ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ವೀಣಾ ಬನ್ನಂಜೆ ಮಾತನಾಡಿದರು.

Tem AGASTYATIMES

Recent Articles

spot_img

Related Stories

Share via
Copy link