ಶಿವಮೊಗ್ಗ (ಏ.09): ಶಿವಮೊಗ್ಗ ತಾಲೂಕಿನ ಸೋಗಾನೆ ವಿಮಾನ ನಿಲ್ದಾಣದ ಮೇಲೆ ಕಮಲದ ಚಿಹ್ನೆಯನ್ನು ನಿರ್ಮಿಸಲಾಗಿದೆ. ಚುನಾವಣಾ ವೇಳೆಯಲ್ಲಿ ನೀತಿ ಸಂಹಿತೆಯಡಿ ವಿಮಾನ ನಿಲ್ದಾಣದ ಮೇಲಿರುವ ಕಮಲ ಚಿಹ್ನೆಯನ್ನು ಬಟ್ಟೆಯಿಂದ ಸಂಪೂರ್ಣವಾಗಿ ಮುಚ್ಚಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ನೇತೃತ್ವದ ನಿಯೋಗ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.
ಇತ್ತೀಚೆಗೆ ಉದ್ಘಾಟನೆ ಕಂಡ ಈ ವಿಮಾನ ನಿಲ್ದಾಣದ ಕಟ್ಟಡದ ವಿನ್ಯಾಸ ಸಂಪೂರ್ಣವಾಗಿ ಬಿಜೆಪಿ ಚಿಹ್ನೆಯಾಗಿದ ಕಮಲದ ವಿನ್ಯಾಸದಲ್ಲಿದೆ. ಈ ಬಗ್ಗೆ ಕಟ್ಟಡ ಆರಂಭವಾದಾಗಲೇ ಈ ಬಗ್ಗೆ ಕಾಂಗ್ರೆಸ್ ಗಮನ ಸೆಳೆದಿತ್ತು. ಸಾರ್ವಜನಿಕರು, ವಿವಿಧ ಸಂಘಟನೆಗಳು ಹೋರಾಟ ಮಾಡಿದ್ದವು. ಆದರೂ ಕಮಲದ ಚಿಹ್ನೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಹೀಗಾಗಿ ಇದನ್ನು ಚುನಾವಣಾ ನೀತಿ ಸಂಹಿತೆಯ ಪ್ರಕಾರ ಚುನಾವಣಾಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಕಮಲದ ಚಿಹ್ನೆ ಇರುವ ಎಲ್ಲ ಭಾಗವನ್ನು ಮುಚ್ಚಬೇಕು. ಆ ಮೂಲಕ ನೀತಿ ಸಂಹಿತೆಯನ್ನು ಕಾಪಾಡಬೇಕು. ಒಂದುವೇಳೆ ಜಿಲ್ಲಾಡಳಿತ ಅಥವಾ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಕೆಪಿಸಿಸಿ ವತಿಯಿಂದಲೇ ಅದನ್ನು ಮುಚ್ಚಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅದೇ ರೀತಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಮತ್ತು ಸಚಿವ ಸಂಪುಟದ ಮಂತ್ರಿಗಳ ಮುಖವಿರುವ ಜಾಹೀರಾತುಗಳು ಇವೆ. ಜೊತೆಗೆ ಸ್ಟಿಕ್ಕರ್‌ಗಳು ರಾರಾಜಿಸುತ್ತಿವೆ. ಇದು ಕೂಡ ಚುನಾವಣಾ ನೀತಿ ಸಂಹಿತೆಗೆ ವಿರೋಧವಾಗಿದೆ. ಈ ಕೂಡಲೇ ಬಸ್‌ಗಳ ಮೇಲಿರುವ ಭಾವಚಿತ್ರ ಮತ್ತು ಜಾಹೀರಾತು ಬರಹಗಳನ್ನು ತೆಗೆದುಹಾಕಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಪ್ರಮುಖರಾದ ಅರ್ಚನಾ ನಿರಂಜನ್, ಸ್ಟೆಲಾ ಮಾರ್ಟಿನ್, ಕವಿತಾ ರಾಘವೇಂದ್ರ, ಮಧುಕುಮಾರ್, ಬಾಲಾಜಿ, ವಿನಯ್ ಸೇರಿದಂತೆ ಹಲವರಿದ್ದರು.
ಮತದಾರರ ಜಾಗೃತಿ ಸ್ಕೇಟಿಂಗ್ ಅಭಿಯಾನ: ನಗರದ ಪಾಲಿಕೆ ಆಶ್ರಯದಲ್ಲಿ ಕರ್ನಾಟಕ ಪತ್ರಿಕಾ ಸಂಪಾದಕರ ಸಂಘ, ನ್ಯೂ ಹಾಟ್ ವೀಲ್ಹ… ಸ್ಕೇಟಿಂಗ್ ಸಂಸ್ಥೆಯು ಏ.10ರಂದು ಬೆಳಗ್ಗೆ 10 ಗಂಟೆ 10 ನಿಮಿಷ 10 ಸೆಕೆಂಡಿಗೆ ಮತದಾರರ ಜಾಗೃತಿ ಸ್ಕೇಟಿಂಗ್ ಅಭಿಯಾನ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಆವರಣದಿಂದ ಆಯೋಜಿಸಿದೆ. ಬೆಳಗ್ಗೆ 9.30ಕ್ಕೆ ನಡೆಯಲಿರುವ ಮತದಾರರ ಜಾಗೃತಿ ಸಭಾ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಉದ್ಘಾಟಿಸಲಿದ್ದಾರೆ. ಸಂಪಾದಕರ ಸಂಘದ ಅಧ್ಯಕ್ಷ ಜಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಅಧೀಕ್ಷಕರಾದ ಬಿ.ಬಾಲರಾಜ್, ಜಿಲ್ಲಾ ವಾರ್ತಾಧಿಕಾರಿ ಶಫಿ ಸಾದುದ್ದೀನ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಹಿರಿಯ ಉದ್ಯಮಿ ಶ್ರೀನಿಧಿ ಸಂಸ್ಥೆಯ ಟಿ.ಆರ್. ಅಶ್ವಥ್‌ನಾರಾಯಣ ಶ್ರೇಷ್ಠಿ, ಉದ್ಯಮಿ ಎಸ್.ಎಲ್. ಕೃಷ್ಣಮೂರ್ತಿ, ಪಾಲಿಕೆ ಸ್ವೀಪ್ ಸಮಿತಿಯ ಟಿ.ಆರ್. ಅನುಪಮಾ, ನ್ಯೂ ಹಾಟ್ ವ್ಹೀಲ್ ಸ್ಕೇಟಿಂಗ್ ಸಂಸ್ಥೆ ಅಧ್ಯಕ್ಷ ಶಿ.ಜು. ಪಾಷಾ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಸ್ವೀಪ್ ಸಮಿತಿ, ಸಂಪಾದಕರ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಸ್ಕೇಟಿಂಗ್ ಸಂಸ್ಥೆ ಪದಾಧಿಕಾರಿಗಳು, ಪೋಷಕರು, ಪಟುಗಳು, ಪತ್ರಕರ್ತರು ಸಾರ್ವಜನಿಕರು ಆಗಮಿಸಲಿದ್ದಾರೆ.
ವರದಿ – ಸಂಪಾದಕೀಯ ಸುದ್ದಿ ಅಗಸ್ತ್ಯ ಟೈಮ್ಸ್.
