ಚಿತ್ರದುರ್ಗ: ಚಿತ್ರದುರ್ಗದ ಮುರುಘಾಶ್ರೀಗಳಿಗೆ ಇಂದೂ ಜಾಮೀನು ಮಂಜೂರಾಗಿಲ್ಲ. ಅವರನ್ನು ಮತ್ತೆ ಹನ್ನೊಂದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ. ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಮುರುಘಾ ಶರಣರ ನ್ಯಾಯಾಂಗ ಬಂಧನ ಇಂದು ಅಂತ್ಯವಾದ ಹಿನ್ನೆಲೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮುರುಘಾಶ್ರೀಗೆ ಇಂದಾದರೂ ಜಾಮೀನು ಸಿಗಬಹುದು ಎಂಬ ನಿರೀಕ್ಷೆ ಭಕ್ತರಲ್ಲಿತ್ತು, ಆದರೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶಿಸಲಾಗಿದೆ. ಅಕ್ಟೋಬರ್ 21 ರವರೆಗೆ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಚಿತ್ರದುರ್ಗ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಆದೇಶವನ್ನು ನೀಡಿದೆ.
ವಾರ್ಡನ್‌ಗೂ ಜೈಲೇ ಗತಿ:
ಪ್ರಕರಣದ ಎರಡನೇ ಆರೋಪಿ ಹಾಸ್ಟೆಲ್‌ನ ಮಹಿಳಾ ವಾರ್ಡನ್ ಅವರ ನ್ಯಾಯಾಂಗ ಬಂಧನ ಮುಗಿದಿತ್ತು. ಅವರನ್ನು ಸಹ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಲೇಡಿ ವಾರ್ಡನ್ ಅವರನ್ನು ಅಕ್ಟೋಬರ್ 21ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ.
ಏನಿದು ಪ್ರಕರಣ?:
ಕಳೆದ ವಾರ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಮಠದ ಶಾಲೆಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯಿರಿಂದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿ ಮೈಸೂರಿನಿಂದ ಚಿತ್ರದುರ್ಗಕ್ಕೆ ಪ್ರಕರಣದ ವಿಚಾರಣೆಯನ್ನು ಹಸ್ತಾಂತರಿಸಲಾಗಿತ್ತು. ಅದಾದ ನಂತರ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದ ಬಳಿಕ ಮುರುಘಾ ಶರಣರನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದರು. ಪ್ರಕರಣ ದಾಖಲಾಗಿ ವಾರ ಕಳೆದರೂ ಬಂಧನವಾಗದಿರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಹ ಶ್ರೀಗಳ ಪರ ಹೇಳಿಕೆ ನೀಡಿದ್ದರು. ಇದಕ್ಕೂ ಆಕ್ರೋಶ ಕೇಳಿ ಬಂದಿತ್ತು. ಸದ್ಯ ಆಸ್ಪತ್ರೆಯಲ್ಲಿರುವ ಶರಣರಿಗೆ 14 ದಿನಗಳ ನ್ಯಾಯಾಂಗ ಬಂಧನವಾಗಿದೆ.
ಪುರುಷತ್ವ ಪರೀಕ್ಷೆ:
ಬಂಧನದ ನಂತರ ಅನಾರೋಗ್ಯದ ಕಾರಣ ನೀಡಿ ಆಸ್ಪತ್ರೆ ಸೇರಲು ಮುಂದಾಗಿದ್ದ ಮುರುಘಾ ಶರಣರಿಗೆ (Murugha Mutt Shivacharya) ಕೋರ್ಟ್ ಶಾಕ್ ನೀಡಿತ್ತು. ಹದಿನಾಲ್ಕು ದಿನ ನ್ಯಾಯಾಂಗ ಬಂಧನದ ಬದಲು, ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತ್ತು. ಪ್ರಕರಣ ದಾಖಲಾಗಿ ಒಂದು ವಾರವಾದರೂ ಬಂಧನವಾಗದಿದ್ದಾಗ ಪ್ರಕರಣದಿಂದ ಶರಣರು ಬಚಾವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಪ್ರತಿಭಟನೆಗಳು ಹೆಚ್ಚಿದ ನಂತರ ಪೊಲೀಸರು ಶ್ರೀಗಳನ್ನು ಬಂಧಿಸಿದ್ದರು. ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಶಿವಾಚಾರ್ಯ ಶರಣರ ಪುರುಷತ್ವ ಪರೀಕ್ಷೆ ಮಾಡಿದ್ದಾರೆ. ವರದಿಯಲ್ಲಿ ಶರಣರು ಗಂಡಸತ್ವ ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ. ಶರಣರ ಡಿಎನ್‌ಎ, ರಕ್ತ, ಮೂತ್ರ, ಕೂದಲು ಸೇರಿದಂತೆ ಹಲವು ಸ್ಯಾಂಪಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಪಡೆದಿದೆ.
ಮೂಲಗಳ ಪ್ರಕಾರ, ನಿನ್ನೆ ಸಂಜೆಯೇ ಶಿವಾಚಾರ್ಯರಿಗೆ ಪುರುಷತ್ವ ಪರೀಕ್ಷೆ (Shivacharya Seer undergoes fertility test) ನಡೆಸಲಾಗಿತ್ತು. ಇಂದು ಬೆಳಗ್ಗೆಯೇ ಈ ಸಂಬಂಧ ವರದಿಯನ್ನು ಕೂಡ ನೀಡಲಾಗಿದೆ. ಉಳಿದ ಮಾದರಿಗಳನ್ನು ಮಡಿವಾಳದ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಈ ಹಿಂದೆ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿ ಪುರುಷನಲ್ಲ ಎಂದು ಅಫಿಡವಿಟ್ ಸಲ್ಲಿಸಿದರೆ ಮಾತ್ರ ಪರೀಕ್ಷೆಗೊಳಪಡಿಸಲಾಗುತ್ತಿತ್ತು. ನಿತ್ಯಾನಂದ ಪ್ರಕರಣದಲ್ಲಿ ಇದೇ ರೀತಿ ಅಫಿಡವಿಟ್ ಸಲ್ಲಿಕೆಯ ನಂತರ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು. ಅಸಾರಾಂ ಬಾಪುವನ್ನು ಕೂಡ ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಗಿತ್ತು.
