ಪ್ರಧಾನಿ ಮೋದಿ – ವಿರೋಧ ಪಕ್ಷಗಳ ವಿರುದ್ಧ ‘ಎನ್‌ಡಿಎ’ ಎಂದೂ ವಿದೇಶಿ ನೆರವನ್ನು ಬೇಡಿಲ್ಲ.

ಇತ್ತ ಬೆಂಗಳೂರಿನಲ್ಲಿ ಎನ್‌ಡಿ‌ಎ ವಿರೋಧಿಗಳ ಸಭೆ ನಡೆದಿದ್ದರೆ, ಅತ್ತ ದೇಶದ ರಾಜಧಾನಿ ದೆಹಲಿಯಲ್ಲಿ ಎನ್‌ಡಿ‌ಎ ಮಿತ್ರ ಪಕ್ಷಗಳನ್ನೊಳಗೊಂಡ ಸಭೆ ನಡೆದಿದೆ.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದು, ಎನ್‌ಡಿಎ ಮಿತ್ರ ಪಕ್ಷಗಳ ಒಕ್ಕೂಟವು ದೇಶಕ್ಕಾಗಿ, ದೇಶದ ಜನತೆಗಾಗಿ ಮತ್ತು ದೇಶದ ಸುರಕ್ಷತೆಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದೆ. ಎನ್‌ಡಿಎಗೆ ದೇಶವೇ ಮೊದಲ ಆದ್ಯತೆ ಎಂಬುದಾಗಿಯೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ನಮಗೆ ಕೆಟ್ಟ ರಾಜಕೀಯ ತಿಳಿದಿಲ್ಲ. ಎನ್‌ಡಿಎ ಒಕ್ಕೂಟ ಆಡಳಿತದಲ್ಲಿಯೇ ಇರಲಿ ಅಥವಾ ವಿರೋಧ ಪಕ್ಷದಲ್ಲಿಯೇ ಇರಲಿ, ನಾವೆಂದೂ ಕೆಟ್ಟ ರಾಜಕಾರಣ ಮಾಡಿಲ್ಲ ಎಂಬುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.

ಎನ್‌ಡಿಎ ಯು ಸರ್ಕಾರದ ವಿರುದ್ಧ ಮಾತನಾಡಲು ವಿದೇಶಗಳ, ವಿದೇಶಿ ವ್ಯಕ್ತಿಗಳ, ವಿದೇಶಿ ಸಂಸ್ಥೆಗಳ ನೆರವನ್ನು ಈ ವರೆಗೂ ಕೇಳಿಲ್ಲ ಎಂಬುದಾಗಿ ಹೇಳಿರುವ ಮೋದಿ, ಆ ಮೂಲಕ ಸದಾ ಕಾಲ ವಿದೇಶಿ ನೆಲದಲ್ಲಿ ಭಾರತವನ್ನು ದೂಷಿಸುವ ಕಾಂಗ್ರೆಸ್‌ಗೆ ತಿವಿದಿದ್ದಾರೆ. ಭಾರತದ ಅಭಿವೃದ್ಧಿ, ಭಾರತೀಯರ ಅಭಿವೃದ್ಧಿಯ ಮಂತ್ರ ದೊಂದಿಗೆ ಎನ್‌ಡಿ‌ಎಯು ರಾಜಕೀಯ ನಡೆಸುತ್ತಿರುವುದಾಗಿಯೂ ಅವರು ನುಡಿದಿದ್ದಾರೆ. ಪ್ರಸ್ತುತ ಯುವ ಜನತೆ ಹೊಸ ಸಂಕಲ್ಪಗಳ ಜೊತೆಗೆ ಮಹತ್ವದ ದೃಢ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಎನ್‌ಡಿಎಯು ಇಂತಹ ಮುಖ್ಯವಾದ ಕಾಲಘಟ್ಟದಲ್ಲಿ ದೇಶವನ್ನು ಹೊಸ ದಿಶೆಯತ್ತ ಕೊಂಡೊಯ್ಯಲು ಮುಖ್ಯ ಪಾತ್ರ ವಹಿಸುತ್ತಿದೆ ಎನ್ನುವುದಾಗಿಯೂ ಮೋದಿ ಅವರು ಹೇಳಿದ್ದಾರೆ.

ಈ ದೇಶದ ದಮನಿತ ವರ್ಗ, ದಲಿತರು, ನಿರ್ಗತಿಕರು, ಬಡ ಜನರು ಎನ್‌ಡಿಎ ಸರ್ಕಾರದ ಮೇಲೆ ಅಪಾರ ಭರವಸೆ ಇರಿಸಿದ್ದಾರೆ. ಎನ್‌ಡಿಎ ಭಾರತದ ಅಭಿವೃದ್ಧಿಗಾಗಿ ಶ್ರಮಿಸುವ ವಿಶ್ವಾಸ ಅವರೆಲ್ಲರದ್ದು ಎಂಬುದಾಗಿಯೂ ಅವರು ನುಡಿದಿದ್ದಾರೆ. ಇಂದು ನಮ್ಮ ಈ ಮಿತ್ರ ಒಕ್ಕೂಟ ಬಲಗೊಳ್ಳಲು ನಮ್ಮನ್ನಗಲಿದ ಬಾಳಾ ಸಾಹೆಹ್ ಠಾಕ್ರೆ, ಪ್ರಕಾಶ್ ಬಾದಲ್ ಸೇರಿದಂತೆ ಇನ್ನೂ ಅನೇಕ ಹಿರಿಯರು, ಅನೇಕ ಮುತ್ಸದ್ಧಿ ನಾಯಕರು ಶ್ರಮಿಸಿದ್ದಾರೆ. ಅವರನ್ನು ಸ್ಮರಿಸುತ್ತಾ, ನಮಗೆ ಈ ಸಂದರ್ಭದಲ್ಲಿ ಜೊತೆೆಯಾದ, ಬೆಂಬಲಿಸಿದ ಎಲ್ಲಾ ಪಕ್ಷಗಳಿಗೂ ಕೃತಜ್ಞತೆ ‌ಗಳನ್ನು ಸಲ್ಲಿಸುವುದಾಗಿಯೂ ಅವರು ನುಡಿದಿದ್ದಾರೆ.

ಹಾಗೆಯೇ ಎನ್‌ಡಿಎ ಜೊತೆಗೆ ಕೈ ಜೋಡಿಸಲು ಉತ್ಸುಕವಾಗಿರುವ ಎಲ್ಲಾ ಪಕ್ಷಗಳಿಗೂ ತಾವು ಸ್ವಾಗತ ಕೋರುವುದಾಗಿಯೂ ‌ಅವರು ಹೇಳಿದ್ದಾರೆ. ಎನ್‌ಡಿಎ ಯು ಎಲ್ಲರ ಪ್ರಗತಿ, ಪರಿಶ್ರಮದ ಪ್ರತಿನಿಧಿಯಾಗಿದೆ. ಒಂದು ರಾಷ್ಟ್ರದ ಅಭಿವೃದ್ಧಿಯ ಹಿಂದೆ ಎಲ್ಲರ ಪರಿಶ್ರಮ ಇರುತ್ತದೆ. ಕಾಂಗ್ರೆಸ್ ಪಕ್ಷ ತೊಂಬತ್ತರ ದಶಕದಲ್ಲಿ ಮೈತ್ರಿಯ ಕಸರತ್ತು ನಡೆಸಿತು. ಕಾಂಗ್ರೆಸ್ ಪಕ್ಷದ ಈ ಡೊಂಬರಾಟ ತಡೆಯಲು, ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಎನ್‌ಡಿಎ ಮೈತ್ರಿ ರಚಿಸಲಾಗಿದೆ. ಆದರೆ ನಾವು ಈ ವರೆಗೂ ಯಾವುದೇ ಸರ್ಕಾರವನ್ನು ಕಿತ್ತೆಸೆಯಲು ಯತ್ನಿಸಿಲ್ಲ. ಒಂದು ದೇಶದಲ್ಲಿ ಸ್ಥಿರ ಸರ್ಕಾರ ಇದ್ದರೆ ಮಾತ್ರ ಆ ದೇಶದ ಪ್ರಗತಿ ಸಾಧ್ಯ ಎಂದು ಅವರು ಹೇಳಿದ್ದಾರೆ.

ನಮ್ಮ ಈ ಒಕ್ಕೂಟದಲ್ಲಿ ಎಲ್ಲ ಪಕ್ಷಗಳು ಸಮಾನ. ಯಾವುದೋ ಒಂದು ಪಕ್ಷ ದೊಡ್ಡದು, ಮತ್ತೊಂದು ಪಕ್ಷ ಸಣ್ಣದು ಎಂಬ ತಾರತಮ್ಯ ಇಲ್ಲ. ಬಿಜೆಪಿ 2014 ಮತ್ತು 2019 ರಲ್ಲಿ ಅತೀ ಹೆಚ್ಚು ಸ್ಥಾನ ಪಡೆದಿದ್ದರೂ, ನಮ್ಮ ಸರ್ಕಾರ ಎನ್‌ಡಿಎ ಸರ್ಕಾರವೇ ಆಗಿದೆ. ನಾವೆಂದಿಗೂ ಮಿತ್ರ ಪಕ್ಷಗಳನ್ನು ಬಿಟ್ಟು ಕೊಟ್ಟಿಲ್ಲ. ನಾವೆಲ್ಲರೂ ಸಮಾಜದಲ್ಲಿನ ಎಲ್ಲಾ ವರ್ಗದ ಜನರ ಜೊತೆಗೂ ಬೆರೆತು ಕೆಲಸ ಮಾಡುತ್ತೇವೆ ಎಂದು ಮೋದಿ ತಿಳಿಸಿದ್ದಾರೆ.

ಪ್ರಸ್ತುತ ಇಡೀ ಪ್ರಪಂಚಕ್ಕೆಯೇ ಭಾರತ ಎಂದರೆ ವಿಶ್ವಾಸವಿದೆ. ನಾವು ವಿಪಕ್ಷದಲ್ಲಿ ಇದ್ದಾಗಲೂ ಸಕಾರಾತ್ಮಕ ರಾಜನೀತಿಯನ್ನೇ ಪ್ರದರ್ಶಿಸಿದ್ದೇವೆ. ನಕಾರಾತ್ಮಕ ರಾಜಕಾರಣಕ್ಕೆ ನಮ್ಮಲ್ಲಿ ಆಸ್ಪದವಿಲ್ಲ. ವಿರೋಧ ಪಕ್ಷದಲ್ಲಿದ್ದಾಗಲೂ ಸರ್ಕಾರದ ಭ್ರಷ್ಟಾಚಾರ, ಹಲವು ಜನ ವಿರೋಧಿ ಯೋಜನೆಗಳನ್ನು ಸಹ ವಿರೋಧಿಸುವ ಕೆಲಸವನ್ನು ಮಾಡಿದ್ದೇವೆ. ಸರ್ಕಾರದ ಅಕ್ರಮಗಳನ್ನು ಸಹ ಬಯಲು ಮಾಡಿದ್ದೇವೆ. ಆದರೆ ಇವೆಲ್ಲಕ್ಕಾಗಿ ನಾವೆಂದೂ ವಿದೇಶಗಳ ನೆರವನ್ನು ಬೇಡಿಲ್ಲ ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಸದ್ಯ ಕೇಂದ್ರ ಸರ್ಕಾರದ ಕೆಲ ಯೋಜನೆಗಳು ಕೆಲವು ರಾಜ್ಯಗಳಲ್ಲಿ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಈ ಸಂಬಂಧ ಆ ರಾಜ್ಯಗಳ ಮುಖ್ಯಮಂತ್ರಿ‌ಗಳಿಗೆ ಪತ್ರ ಬರೆದಿದ್ದರೂ, ಈ ವರೆಗೂ ಸಮರ್ಪಕ ದಾಖಲೆಗಳನ್ನು ಮಾತ್ರ ಕೇಂದ್ರಕ್ಕೆ ಒದಗಿಸುವ ಕೆಲಸ ನಡೆದಿಲ್ಲ. ಅಂತಹ ಭ್ರಷ್ಟಾಚಾರದ ಮೈತ್ರಿ ದೇಶಕ್ಕೆ ಹಾನಿ ಮಾಡುತ್ತದೆ. ಕಳೆದ ಒಂಬತ್ತು ವರ್ಷಗಳ ಹಿಂದೆ ದೇಶದಲ್ಲಿ ಯಾವ ರೀತಿಯ ಆಡಳಿತ ಇತ್ತು ಎಂಬುದನ್ನು ನಾವು ಬಲ್ಲೆವು. ಭಾರತದ ಅಭಿವೃದ್ಧಿ ಹೇಗಿತ್ತು ಎಂಬುದನ್ನು ಸಹ ನಾವು ನೋಡಿದ್ದೇವೆ ಎಂಬುದಾಗಿ ಅವರು ತಿಳಿಸಿದ್ದಾರೆ. ಆದರೆ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಈ ದೇಶ ಹೇಗೆ ಬದಲಾಗಿದೆ, ಈ ದೇಶದ ಬಡವರಿಗೆ ತಮ್ಮ ಕನಸು ಗಳನ್ನು ಈಡೇರಿಸಿಕೊಳ್ಳಲು ಏನೆಲ್ಲಾ ಮಾಡಿದ್ದೇವೆ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದು ಅವರು ನುಡಿದಿದ್ದಾರೆ.

ನಮ್ಮ ಸರ್ಕಾರ ಪಕ್ಷಾತೀತವಾಗಿ, ಸಾಮಾನ್ಯ ಜನರಿಗೂ ಅವರಿಗೆ ಸಲ್ಲಬೇಕಾದ ಗೌರವ, ಪುರಸ್ಕಾರಗಳನ್ನು ನಿಷ್ಪಕ್ಷಪಾತವಾಗಿ ನೀಡಿದೆ. ನಮ್ಮ ವಿರುದ್ಧ ಮಾತನಾಡುವ ವಿರೋಧಿಗಳ ಸೇವೆಯನ್ನೂ ಪರಿಗಣಿಸಿ ನಾವು ಪುರಸ್ಕಾರಗಳನ್ನು ನೀಡಿದ್ದೇವೆ. ಆದರೆ ಈ ಹಿಂದಿನ ಸರ್ಕಾರ ಹೀಗಿರಲಿಲ್ಲ ಎಂಬುದಾಗಿ ಎನ್‌ಡಿಎ ಸರ್ಕಾರದ ಸಾಧನೆ ಗಳನ್ನೂ ಸಹ ಅವರು ತೆರೆದಿಟ್ಟಿದ್ದಾರೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಮಿತ್ರ ಪಕ್ಷಗಳ ಸಭೆ, ವಿರೋಧ ಪಕ್ಷಗಳ ಎದೆಯಲ್ಲಿ ನಡುಕ ಹುಟ್ಟಿಸಿರುವುದಂತೂ ‌ಸತ್ಯ.

Recent Articles

spot_img

Related Stories

Share via
Copy link