ಪಂಡರಾಪುರ ವಿಠಲನ ದರ್ಶನಕ್ಕೆ ಮೊದಲು ಪತ್ನಿಗೆ ಚಿನ್ನದ ಸರ ಕೊಡಿಸುವ ಬಯಕೆ: ಪವಾಡದಂತೆ ಈಡೇರಿತು 90ರ ವೃದ್ಧನ ಬಯಕೆ

ತಮ್ಮ ಪತ್ನಿಗೆ ಚಿನ್ನದ ಕರಿಮಣಿ ಸರ ಕೊಡಿಸಬೇಕೆಂಬ ಹಿರಿಯ ವ್ಯಕ್ತಿಯ ಆಸೆಯನ್ನು ಜ್ಯುವೆಲ್ಲರಿ ಅಂಗಡಿಯ ಮಾಲೀಕರು ಈಡೇರಿಸಿದ್ದಾರೆ.

ಚಿನ್ನದ ದರ ಗಗನಕ್ಕೇರಿದೆ. ಬಡವರ್ಗದ ಜನ ಸಾಮಾನ್ಯರು ಚಿನ್ನ ಖರೀದಿಸುವುದು ದೂರದ ಮಾತು. ಆದರೂ ಜನರಿಗೆ ಅದರಲ್ಲೂ ಮಹಿಳೆಯರಿಗೆ ಚಿನ್ನದ ಮೇಲಿನ ವ್ಯಾಮೋಹ ಎಂದಿಗೂ ಕಡಿಮೆಯಾಗುವುದೇ ಇಲ್ಲ, ಅದರಲ್ಲೂ ಚಿನ್ನದ ಕರಿಮಣಿ ಸರವನ್ನು ಜೀವನದಲ್ಲಿ ಒಮ್ಮೆಯಾದರೂ ಧರಿಸಬೇಕು ಎಂಬುದು ಬಹುತೇಕ ಮುತ್ತೈದೆಯರ ಆಸೆ. ಅದೇ ರೀತಿ ಇಲ್ಲೊಂದು ಕಡೆ ಆ ಹಿರಿಯ ಜೀವಕ್ಕೆ 90 ದಾಟಿದ್ದು, ಪಾಂಡರಪುರದ ಪಾಂಡುರಂಗನ ದರ್ಶನಕ್ಕೆ ಆ ದಂಪತಿ ಬಂದಿದ್ದರು. ಅದಕ್ಕೂ ಮೊದಲು ತಮ್ಮ ಪತ್ನಿಗೆ ಚಿನ್ನದ ಕರಿಮಣಿ ಸರ ಕೊಡಿಸಬೇಕು ಎಂಬ ಬಯಕೆ ಅವರದಾಗಿತ್ತು.. ಅದರಂತೆ ಈ ಹಣ್ಣು ಹಣ್ಣು ಪ್ರಾಯದ ಅಜ್ಜ ತಮ್ಮ ಪತ್ನಿಯನ್ನು ಕರೆದುಕೊಂಡು ತಾವು ಎಷ್ಟೋ ಕಾಲದಿಂದ ಕೂಡಿಟ್ಟ ಚಿಲ್ಲರೆ ಪಲ್ಲರೆ ಹಣವನ್ನೆಲ್ಲಾ ತೆಗೆದುಕೊಂಡು ಬಂದು ಚಿನ್ನದ ಅಂಗಡಿಯೊಂದಕ್ಕೆ ಬಂದಿದ್ದರು. ನಂತರ ಆಗಿದ್ದು, ಪವಾಡವೇ ಸರಿ ನೋಡಿ.

ಪಾಂಡರಪುರದ ಪಾಂಡುರಂಗನ ದರ್ಶನಕ್ಕೆ ಹೊರಟ ಈ ಇಳಿಪ್ರಾಯದ ಜೋಡಿಯನ್ನು ನೋಡಿ ಆ ಜ್ಯುವೆಲ್ಲರಿ ಶಾಪ್ ಮಾಲೀಕರಿಗೆ ಏನನಿಸಿತೋ ಏನೋ ಅಜ್ಜ ಅಜ್ಜಿಯ ಬಳಿಯಿಂದ ಯಾವ ಕಾಸನ್ನು ಪಡೆಯದೇ ಕೇವಲ ಆಶೀರ್ವಾದವನ್ನು ಮಾತ್ರ ಬೇಡಿ ಜ್ಯುವೆಲ್ಲರಿ ಮಾಲೀಕರು ಅಜ್ಜನ ಆಸೆ ಈಡೇರಿಸಿದ್ದಾರೆ. ಅಜ್ಜಿಗೆ ಸರ ಹಾಗೂ ಕಿವಿಯೋಲೆಯನ್ನು ಯಾವುದೇ ಹಣ ಪಡೆಯದೇ ಕೊಡಿಸಿದ್ದು, ಈ ಭಾವುಕ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ವೈರಲ್ ಆದ ವೀಡಿಯೋದಲ್ಲಿ ವೃದ್ಧ ದಂಪತಿ ಜ್ಯುವೆಲ್ಲರಿ ಶಾಪ್‌ಗೆ ಬಂದಿದ್ದು, ಅಲ್ಲಿ ಪತ್ನಿಗಾಗಿ ಬಂಗಾರದ ಮಂಗಳಸೂತ್ರವನ್ನು ಅವರು ಕೇಳುತ್ತಾರೆ. ಜೊತೆಗೆ ತಾವು ಚೀಲದಲ್ಲಿ ತಂದಿದ್ದ ಹಣವನ್ನೆಲ್ಲಾ ಅಲ್ಲಿ ಅವರು ನೀಡುವುದಕ್ಕೆ ಪ್ರಯತ್ನಿಸುತ್ತಾರೆ. ಆದರೆ ಸ್ವತಃ ಜ್ಯುವೆಲ್ಲರಿ ಶಾಪ್ ಮಾಲೀಕ ಅಜ್ಜನಿಗೆ ಈ ಅಜ್ಜಿಯ ಮೇಲಿನ ಪ್ರೀತಿಗೆ ಭಾವುಕರಾಗಿದ್ದು, ಯಾವ ಹಣವನ್ನು ಪಡೆಯದೇ ಅಜ್ಜ ಅಜ್ಜಿಗೆ ಚಿನ್ನದ ಸರ ಹಾಗೂ ಕಿವಿಯೋಲೆಯನ್ನು ನೀಡಿದ್ದಾರೆ.

ನಿಮ್ಮಿಂದ ನಾನು ದುಡ್ಡು ತೆಗೆದುಕೊಳ್ಳಲ್ಲ, ತೆಗೆದುಕೊಂಡರೆ ಆ ಪಾಡುರಂಗ ಮೆಚ್ಚಲ್ಲ, ಹಣಕ್ಕಿಂತ ನಿಮ್ಮ ಆಶಿರ್ವಾದ ಬೇಕು.. ಆ ಪಾಂಡುರಂಗನ ಆಶೀರ್ವಾದ ನನ್ನ ಮೇಲಿರಲಿ ಎಂದು ಹಾರೈಸಿ ಎಂದು ಹೇಳುತ್ತಾರೆ. ಇದಕ್ಕೆ ಹಣ ತೆಗೆದುಕೊಳ್ಳದೇ ಹೋದರೆ ತಪ್ಪಾಗುತ್ತದೆ ಎಂದು ವೃದ್ಧ ಹೇಳಿದ್ದಾರೆ. ಇದಕ್ಕೆ ಜ್ಯುವೆಲ್ಲರಿ ಶಾಪ್ ಮಾಲೀಕ ನಿಮ್ಮ ಖುಷಿಗೆ ಸರಕ್ಕೆ 10 ರೂ. ಕಿವಿಯೊಲೆಗೆ 10 ರೂ.. ಕೊಡಿ ಎಂದು ಹೇಳುತ್ತಾರೆ. ಅಲ್ಲದೇ ಈಗಿನ ಗಗನಕ್ಕೇರಿರುವ ಬಂಗಾರದ ದರದ ಮುಂದೆ ಈ ವೃದ್ಧ ದಂಪತಿ ಕೂಡಿಟ್ಟ ಹಣ ಯಾವುದಕ್ಕೂ ಬಾರದು. ಆದರೆ ಅವರನ್ನು ಸುಮ್ಮನೆ ಹಾಗೆ ಕಳಿಸಲು ಬಯಸದ ಅಂಗಡಿ ಮಾಲೀಕ ಉದಾರತೆ ತೋರಿ ಬಂಗಾರದ ಸರ ಹಾಗೂ ಕಿವಿಯೋಲೆ ಕೊಡಿಸಿದ್ದು, ಇದಕ್ಕೆ ವೃದ್ಧ ದಂಪತಿ ಬಹಳ ಭಾವುಕರಾಗಿದ್ದಾರೆ.

ಜ್ಯುವೆಲ್ಲರಿ ಶಾಪ್ ನೀಡಿದ ಈ ಬಂಗಾರದ ಸರಕ್ಕೆ ಕಡಿಮೆ ಎಂದರೂ ಇಂದಿನ ಚಿನ್ನದ ದರದ ಮುಂದೆ ಎರಡು ಲಕ್ಷಕ್ಕಿಂತ ಮೇಲಾಗುವುದು ಪಕ್ಕಾ. ವೃದ್ಧನಿಗೆ ತನ್ನ ಪತ್ನಿಗೆ ಚಿನ್ನ ಕೊಡಿಸುವ ಮುಗ್ಧ ಪ್ರೇಮದ ಜೊತೆ ಜ್ಯುವೆಲ್ಲರಿ ಶಾಪ್ ಮಾಲೀಕನ ಉದಾರತೆ ಈಗ ಸಾಕಷ್ಟು ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದು, ವೃದ್ಧ ದಂಪತಿಯ ಪ್ರೀತಿಗೆ ಭಾವುಕರಾಗುವ ಜೊತೆ ಅಂಗಡಿ ಮಾಲೀಕನ ಉದಾರತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಸಂಭಾಜಿನಗರದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಗೋಪಿಕಾ ಜ್ಯುವೆಲ್ಲರಿ ಸಂಭಾಜಿನಗರ ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ. ಅನೇಕರು ಅಂಗಡಿ ಮಾಲೀಕರಿಗೆ ಧನ್ಯವಾದ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link