ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎ ಮಿತ್ರ ಪಕ್ಷಗಳ ವಿರುದ್ಧ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಒಗ್ಗೂಡಿ ಮಹಾಘಟಬಂಧನ ನಡೆಸಿದ್ದು, ಈ ಒಕ್ಕೂಟಕ್ಕೆ I.N.D.I.A. ಎಂಬುದಾಗಿ ಹೆಸರನ್ನಿರಿಸಿರುವುದು ಹಳೆಯ ವಿಷಯ.
ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಪ್ರಧಾನಿ ಮೋದಿ ಅವರೇ ಖುದ್ದಾಗಿ ಪ್ರತಿಕ್ರಿಯೆಯನ್ನೂ ನೀಡಿದ್ದರು. ಇಂಡಿಯಾ ಎಂಬುದು ಉಗ್ರ ಸಂಘಟನೆ ಮುಜಾಹಿದ್ದೀನ್ ನಲ್ಲಿಯೂ ಇದೆ, ಭಾರತವನ್ನು ಲೂಟಿ ಮಾಡಿದ ಈಸ್ಟ್ ಇಂಡಿಯಾ ಕಂಪನಿ ಹೆಸರಿನಲ್ಲಿಯೂ ಇಂಡಿಯಾ ಎಂದು ಇದೆ. ಈ ಹೆಸರಿನ ಮೂಲಕ ಭಾರತವನ್ನು ಸೋಲಿಸಲು, ಭಾರತೀಯರನ್ನು ದಾರಿ ತಪ್ಪಿಸಲು ವಿಪಕ್ಷಗಳು ಸಿದ್ದತೆ ನಡೆಸುತ್ತಿವೆ ಎಂಬುದಾಗಿ ಅವರು ಈ ಒಕ್ಕೂಟದ ಬಗ್ಗೆ ವಾಗ್ದಾಳಿ ನಡೆಸಿದ್ದರು.
ಇದಕ್ಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರೇ, ಇಂಡಿಯಾ ಎಂಬ ಸುಂದರ, ಸುಮಧುರ, ಪವಿತ್ರ ಹೆಸರಿನ ಬಗ್ಗೆ ನಿಮಗೆ ಯಾಕಿಷ್ಟು ದ್ವೇಷ ಎಂಬುದಾಗಿ ಪ್ರಶ್ನಿಸಿದ್ದಾರೆ. ಭಾರತಕ್ಕೆ ನೂರಾರು ಕೋಟಿ ನಷ್ಟ ಮಾಡಿ ವಿದೇಶಕ್ಕೆ ಓಡಿ ಹೋದ ನೀರವ್ ಮೋದಿ, ಲಲಿತ್ ಮೋದಿ ಅವರ ಉಪನಾಮವೂ ಮೋದಿ ಎಂಬುದಾಗಿಯೇ ಆಗಿದೆ. ಹಾಗೆಂದು ಪ್ರಧಾನಿ ಮೋದಿ ಅವರನ್ನು ಅವರಿಗೆ ಹೋಲಿಕೆ ಮಾಡುವುದು ಸರಿಯೇ ಎಂದು ಹೇಳಿದ್ದಾರೆ. ಜೊತೆಗೆ ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಕಾನೂನನ್ನು ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಜಾರಿಗೆ ತರುವುದಾಗಿ ಹೇಳಿದೆ. ಆ ಮೂಲಕ ಅನಗತ್ಯ ವಿವಾದವನ್ನು ಸೃಷ್ಟಿ ಮಾಡಿದೆ ಎಂಬುದಾಗಿಯೂ ಸಿದ್ದು ವಾಗ್ದಾಳಿ ನಡೆಸಿದ್ದಾರೆ.
ಮಾನ್ಯ ಸಿ ಎಂ ಅವರೇ, ಜನರನ್ನು ದಾರಿ ತಪ್ಪಿಸಲು ನೀವು ಮತ್ತು ನಿಮ್ಮದೇ ಮನಸ್ಥಿತಿಯನ್ನು ಹೊಂದಿರುವ ಇತರ ವಿರೋಧ ಪಕ್ಷಗಳು ಭಾರತವನ್ನು ಮೋಸ ಮಾಡುವುದಕ್ಕೆ ನಿಮ್ಮ ಒಕ್ಕೂಟಕ್ಕೆ ಇಂಡಿಯಾ ಎಂದು ನಾಮಕರಣ ಮಾಡಿದ್ದೀರಿ. ಪ್ರಧಾನಿ ಮೋದಿ ಅವರಿಗೆ ಇಂಡಿಯಾ (ಭಾರತ) ದ ಬಗ್ಗೆ ತಕರಾರಿಲ್ಲ. ಜೊತೆಗೆ ಭಾರತವನ್ನು ಪ್ರಧಾನಿ ಮೋದಿ ಅವರಷ್ಟು ಪ್ರೀತಿಸುವ, ದೇಶದ, ಜನರ ಅಭಿವೃದ್ಧಿಯ ಕಾಳಜಿ ವಹಿಸುತ್ತಿರುವವರು ಸಹ ನಿಮ್ಮ ಒಕ್ಕೂಟದಲ್ಲಿ ಯಾರೂ ಇಲ್ಲ. ಅಷ್ಟಕ್ಕೂ ಪ್ರಧಾನಿ ಮೋದಿ ಅವರು ನಿಮ್ಮ ಮಹಾಘಟಬಂಧನ I.N.D.I.A. ವನ್ನು ದೂಷಣೆ ಮಾಡಿದ್ದೇ ಹೊರತು, INDIA (ಭಾರತ) ವನ್ನಲ್ಲ ಎಂಬುದನ್ನು ಗಮನದಲ್ಲಿಡಿ.
ಕಾಂಗ್ರೆಸ್ ಎಂದರೆ ಕುಟುಂಬ ರಾಜಕಾರಣ, ಅವರಿಂದ ಈ ವರೆಗೆ ದೇಶದ ಅಭಿವೃದ್ಧಿ ಆಗಿಲ್ಲ ಎಂಬುದು ಎಲ್ಲರಿಗೂ ತಿಳಿದ ಸತ್ಯ. ಇಡೀ ದೇಶವೇ ಕಾಂಗ್ರೆಸ್ ಕರ್ಮ ಕಾಂಡ ಗಳ ಬಗ್ಗೆ ಮಾತನಾಡುತ್ತದೆ. ಆದರೆ ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಅವರ ಮೇಲೆ ಭ್ರಷ್ಟಾಚಾರದ ಕರಿ ನೆರಳು ಸಹ ಸೋಕಿಲ್ಲ ಎಂಬ ಸತ್ಯವೂ ಸಂಪೂರ್ಣ ದೇಶಕ್ಕೆ ಗೊತ್ತು. ಭಾರತದ ಬಡ ಜನರಿಗೂ ಕಳೆದ ಒಂಬತ್ತು ವರ್ಷಗಳಲ್ ಹಿಂದೆ ಸಿಕ್ಕಿರದ ಮೂಲಭೂತ ಅವಶ್ಯಕತೆಗಳನ್ನು, ಕಳೆದ ಒಂಬತ್ತು ವರ್ಷಗಳೊಳಗೆ ಒದಗಿಸುವ ಕೆಲಸ ಮಾಡಿದ್ದು ಇದೇ ಮೋದಿ ಸರ್ಕಾರ ಎಂಬುದು ನೆನಪಿರಲಿ. ಜೊತೆಗೆ ನಿರುದ್ಯೋಗ ಸಮಸ್ಯೆಯಿಂದ ಬಡವಾಗಿದ್ದ ದೇಶವನ್ನು ಸ್ವಾವಲಂಬಿ ಕಲ್ಪನೆ, ಉದ್ಯೋಗ ಸೃಷ್ಟಿ, ಆತ್ಮನಿರ್ಭರ ಭಾರತದ ಕನಸುಗಳ ಜೊತೆಗೆ ಸ್ವ ಉದ್ಯೋಗಕ್ಕೆ ಯುವ ಜನರನ್ನು ಪ್ರೇರೇಪಿಸಿ, ಉದ್ಯೋಗದ ದಾರಿಗಳನ್ನು ಹುಡುಕಿ ಕೊಟ್ಟಿದ್ದು ಸಹ ಇದೇ ಮೋದಿ ಸರ್ಕಾರ.
ನಿಮ್ಮ ಹಾಗೆ ಬಿಟ್ಟಿ ಭಾಗ್ಯಗಳನ್ನು ಘೋಷಿಸಿ, ಅವುಗಳನ್ನು ಈಡೇರಿಸಲು ಜನರ ಜೇಬಿಗೆಯೇ ಕತ್ತರಿ ಹಾಕುವ ಕೆಲಸವನ್ನು ಮೋದಿ ಸರ್ಕಾರ ಮಾಡಿಲ್ಲ. ನಿಮ್ಮ ಕೆಲವೇ ತಿಂಗಳ ಆಡಳಿತದಲ್ಲಿ ಕರ್ನಾಟಕದ ಆರ್ಥಿಕ ಪರಿಸ್ಥಿತಿ, ಅಭಿವೃದ್ಧಿ, ಜನರ ಜೀವನ ಮಟ್ಟ ಹೇಗೆ ಕುಸಿತವಾಗಿದೆ ಎಂಬುದು ನಿಮಗೆ ತಿಳಿದಿದೆ ಅಲ್ಲವೇ.. ಈ ವರ್ಷ ರಾಜ್ಯದ ಅಭಿವೃದ್ಧಿ ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ. ಈಗಾಗಲೇ ಐದು ಗ್ಯಾರಂಟಿಗಳ ಜಾರಿಗೆ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂಬ ಹೇಳಿಕೆಯನ್ನು ಈಗಾಗಲೇ ಡಿ ಕೆ ಶಿವಕುಮಾರ್ ಅವರೇ ನಿಮ್ಮ ಪಕ್ಷದ ಶಾಸಕಾಂಗ ಸಭೆಯಲ್ಲಿ ಹೇಳಿದ್ದಾಗಿಯೂ ಸುದ್ದಿ ಹರಿದಾಡುತ್ತಿದೆ. ಹೀಗಿರುವಾಗ ದೇಶದ ಅಭಿವೃದ್ಧಿಯ ಆಶಯದ ಜೊತೆಗೆ ರಾತ್ರಿ ಹಗಲೆನ್ನದೆ ಹೋರಾಡುತ್ತಿರುವ ಪ್ರಧಾನಿ ಮೋದಿ ಅವರ ಬಗ್ಗೆ ಸಮಾಜದಲ್ಲಿ ಸುಳ್ಳು ಬಿತ್ತಲು ಹೊರಟಿದ್ದೀರಲ್ಲಾ.. ನಿಮಗೆ ಅಸಹ್ಯ ಎನಿಸುವುದಿಲ್ಲವೇ.
ಮೊದಲು ವಿದೇಶಿ ನೆಲದಲ್ಲಿ ನಿಂತು ಭಾರತವನ್ನು ಅಪಮಾನ ಮಾಡುವಂತೆ ಹೇಳಿಕೆ ನೀಡುವ ಐವತ್ತರ ಯುವಕ ನಿಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ಬುದ್ಧಿ ಹೇಳಿ. ಸಾಧ್ಯವಾದರೆ ಭಾರತವನ್ನು ಪ್ರೀತಿಸಿ. ಅಲ್ಲದೆ ವಿದೇಶದಲ್ಲಿ ಭಾರತವನ್ನು ಅವಮಾನಿಸುವ ಹೇಳಿಕೆಗಳನ್ನು ನೀಡದಂತೆ ತಿಳಿ ಹೇಳಿ. ಅಲ್ಲದೆ ಭಾರತವನ್ನು ವಿಶ್ವಮಾನ್ಯವನ್ನಾಗಿಸಿದ ಪ್ರಧಾನಿ ಮೋದಿ ಅವರನ್ನು ವಿರೋಧಿಸುವುದನ್ನೇ ಕಾಯಕ ಮಾಡಿಕೊಳ್ಳಬೇಡಿ. ನೀವು ಸಹ INDIA ವನ್ನು ಪ್ರೀತಿಸಿ. ಬದಲಾಗಿ I.N.D.I.A. ವನ್ನು ಪ್ರೀತಿಸುವ ಮೂಲಕ ದೇಶದ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನ ಬಿಡಿ.
ಇನ್ನು ಯು ಸಿ ಸಿ ಎಲ್ಲರಿಗೂ ಒಂದೇ ರೀತಿಯ ನ್ಯಾಯವನ್ನು ಒದಗಿಸುವ ವಿಚಾರ. ಇದು ಜಾರಿಯಾದಲ್ಲಿ ಇಡೀ ದೇಶಕ್ಕೆ ನ್ಯಾಯ ಸಿಕ್ಕಂತೆ. ನಿಮಗೆ ಇದರ ವಿರುದ್ಧ ಉರಿ ಸಹಜ ಬಿಡಿ. ಏಕೆಂದರೆ ನೀವು ಅಲ್ಲಿನ ಕೃಪೆಯಿಂದ, ಅಲ್ಪಸಂಖ್ಯಾತರ ದಯೆಯಿಂದ ಗೆದ್ದು ಬಂದಿರುವುದೆಂದು ಈಗಾಗಲೇ ನಿಮ್ಮ ಪಕ್ಷದ ನಾಯಕರು ಹೇಳಿದ್ದಾರಲ್ಲ. ಅಲ್ಲದೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಭರಪೂರ ಕೊಡುಗೆಗಳನ್ನು ನೀಡಿ ಬಹುಸಂಖ್ಯಾತರನ್ನು ಕಡೆಗಣಿಸಿದವರಲ್ಲವೇ. ಉಗ್ರರನ್ನೇ ಸಗೋದರರೆನ್ನುವ ನೀವು ಯುಸಿಸಿ ಜಾರಿಯನ್ನು ವಿರೋಧಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ ಬಿಡಿ. ಒಂದು ವೇಳೆ ಸಮಾನ ನಾಗರಿಕ ಸಂಹಿತೆ ಕಾನೂನು ಜಾರಿಗೆ ಬಂದಲ್ಲಿ ಅದರಿಂದ ದೊಡ್ಡ ಹೊಡೆತ ನಿಮಗಾಗುತ್ತದೆ ಎಂದಾಗ, ನಿಮ್ಮಿಂದ ಇಂತಹ ಮಾತುಗಳು ನಿರೀಕ್ಷಿತ. ಜೊತೆಗೆ ಈ ವಿಷಯದಲ್ಲಿ ವಿವಾದ ಸೃಷ್ಟಿಸಲು ನೀವು ಎಂತಹ ಹೇಳಿಕೆಗಳನ್ನು ಸಹ ನೀಡುತ್ತೀರಿ ಬಿಡಿ. ಏಕೆಂದರೆ ಮುಂದಿನ ಚುನಾವಣೆಯಲ್ಲಿ ಶಾಂತಿದೂತರು ನಿಮಗೆ ಆಶೀರ್ವಾದ ಮಾಡಬೇಕಲ್ಲವೇ.
ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಣೆ ಮಾಡುವ ನೀವು, ಅವರಿಂದ ಬಹುಸಂಖ್ಯಾತ ವರ್ಗ ಅನುಭವಿಸುತ್ತಿರುವ ಅನ್ಯಾಯದ ಬಗೆಗೂ ಕಣ್ಣು ತೆರೆದು ನೋಡಿದಲ್ಲಿ ಉತ್ತಮ. ಬಹುಸಂಖ್ಯಾತರು ಸಹ ಮನುಷ್ಯರೇ. ಅವರ ತೆರಿಗೆಯ ಹಣವೂ ರಾಜ್ಯದ ಬೊಕ್ಕಸ ಸೇರುತ್ತದೆ. ಹಾಗಾಗಿ ಅವರಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸಿ. ಇದೆಲ್ಲಾ ನಿಮ್ಮ ಸರ್ಕಾರಕ್ಕೆ ಸಾಧ್ಯವಾದ ಬಳಿಕ ಪ್ರಧಾನಿ ಮೋದಿ ಅವರ ಬಗ್ಗೆ ನಾಲಿಗೆ ಹರಿಯಬಿಡಿ. ಇಲ್ಲವಾದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ನಿಮ್ಮನ್ನು ಕ್ಯಾಕರಿಸಿ ಉಗಿಯುತ್ತಾರೆ. ಅದಕ್ಕೆ ಸಜ್ಜಾಗಿ.
