ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ರಾಜ್ಯದ ಜನರನ್ನು ಮೋಡಿ ಮಾಡಲು ನೀಡಿದ ಉಚಿತ ಭರವಸೆಗಳು, ಈಗ ಕೈ ಸರ್ಕಾರದ ಕುತ್ತಿಗೆಗೆ ಹಾವಿನಂತೆ ಸುತ್ತಿಕೊಂಡಿದೆ ಎನ್ನುವುದು ಸ್ಪಷ್ಟ.
ತಾವು ಪ್ರಣಾಳಿಕೆಯಲ್ಲಿ ಹೇಳಿದ್ದ ಬಿಟ್ಟಿ ಭಾಗ್ಯಗಳ ಪೂರೈಕೆಗೆ ರಾಜ್ಯದ ಬೊಕ್ಕಸದ ಹಣವನ್ನು ನೀರಿನ ಹಾಗೆ ಪೋಲಿಸ್ ಮಾಡಿರುವ ಕೈ ಸರ್ಕಾರ, ಈಗ ರಾಜ್ಯದ ಅಭಿವೃದ್ಧಿಯ ಕೆಲಸಗಳಿಗೆ ಆರ್ಥಿಕತೆ ಇಲ್ಲದೆ ಪರದಾಡುತ್ತಿರುವುದು ದುರಾದೃಷ್ಟಕರ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಹಣವಿಲ್ಲ ಎಂಬುದಾಗಿ ಇದೀಗ ಕಾಂಗ್ರೆಸ್ ಸರ್ಕಾರದ ಮಂತ್ರಿಗಳೇ ಹೇಳುತ್ತಿರುವುದು, ಇವರು ರಾಜ್ಯದ ಬೊಕ್ಕಸವನ್ನು ಅನಗತ್ಯವಾಗಿ ಹೇಗೆ ಬರಿದು ಮಾಡಿದ್ದಾರೆ ಎನ್ನುವುದಕ್ಕೆ ಜ್ವಲಂತ ಸಾಕ್ಷಿ.
ಈ ಬಗ್ಗೆ ಸ್ವತಃ ರಾಜ್ಯ ಕಾಂಗ್ರೆಸ್ ಸರ್ಕಾರದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರೇ ತಮ್ಮ ಪಕ್ಷದ ಶಾಸಕರಿಗೆ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿರುವ ಕಾರಣ, ಈ ವರ್ಷ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ನಡೆಸಲು ಸಾಧ್ಯವಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಅವರು ಸರ್ಕಾರದ ಈ ದುರಂತ ಸ್ಥಿತಿಯನ್ನು ಡಿಕೆಶಿ ಅವರು ತಮ್ಮ ಪಕ್ಷದವರಿಗೆ ತಿಳಿಸಿದ್ದಾರೆ. ಐದು ಗ್ಯಾರಂಟಿಗಳ ಜಾರಿಗೆ ಸರ್ಕಾರ ಹಣ ವ್ಯಯಿಸಿದ್ದು, ಸದ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎನ್ನುವುದಾಗಿಯೂ ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಶಾಸಕರೇ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹಣ ನೀಡುತ್ತಿಲ್ಲ ಎಂಬುದಾಗಿ ಸಿದ್ದು ಮತ್ತು ತಂಡದ ವಿರುದ್ಧ ಗರಂ ಆಗಿದ್ದು, ಅವರನ್ನು ಸಮಾಧಾನ ಪಡಿಸಲು ಡಿಕೆಶಿ ಪ್ರಯತ್ನ ಮಾಡುವ ಸಂದರ್ಭದಲ್ಲಿ, ಸರ್ಕಾರದ ಬೊಕ್ಕಸ ಬರಿದಾಗಿರುವ ಮಾಹಿತಿ ನೀಡಿದ್ದಾರೆ. ಆ ಮೂಲಕ ತಾವು ರಾಜ್ಯದ ಜನರ ತೆರಿಗೆ ಹಣವನ್ನು ತಮ್ಮ ಬಿಟ್ಟಿ ಭರವಸೆಗಳ ಈಡೇರಿಕೆಗಾಗಿ ದುಂದುವೆಚ್ಚ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಡಿಕೆಶಿ ಅವರ ಈ ಮಾಹಿತಿ ಸಾರ್ವಜನಿಕರ ಆಕ್ರೋಶಕ್ಕೂ ಇದೀಗ ಕಾರಣವಾಗಿದೆ ಎನ್ನುವುದು ಸುಳ್ಳಲ್ಲ.
ಈ ವರ್ಷ ನಮ್ಮ ಐದು ಭರವಸೆಗಳ ಈಡೇರಿಕೆಗಾಗಿ ನಲವತ್ತು ಸಾವಿರ ಕೋಟಿ ರೂ. ಗಳನ್ನು ಮೀಸಲಿಟ್ಟಿದ್ದೇವೆ. ಹಾಗಾಗಿ ಈ ವರ್ಷ ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಸರ್ಕಾರ ಮಾಡುವುದು ಸಾಧ್ಯವಿಲ್ಲ. ಹಾಗೆಯೇ ರಾಜ್ಯದಲ್ಲಿ ನೀರಾವರಿಗೆ ಮತ್ತು ಸಾರ್ವಜನಿಕ ಕೆಲಸಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೂ ಆರ್ಥಿಕ ಸಂಪನ್ಮೂಲ ನೀಡಲು ಸಾಧ್ಯವಿಲ್ಲ. ಹಾಗಾಗಿ ಶಾಸಕರುಗಳಿಗೆ ದಿನ ದೂಡುವಂತೆ ಸೂಚಿಸಲಾಗಿದೆ ಎಂದು ಡಿಕೆಶಿ ತಮ್ಮ ಸರ್ಕಾರದ ಅಸಾಮರ್ಥ್ಯವನ್ನು ಬಯಲು ಮಾಡಿದ್ದಾರೆ.
ಹಣಕಾಸಿನ ವಿಚಾರಗಳಿಗೆ ಸಂಬಂಧಿಸಿದ ಹಾಗೆ ತಮ್ಮ ಸಂಪುಟ ಸಿಬ್ಬಂದಿಗಳಿಗೆ ತಾಳ್ಮೆ ಯಿಂದ ಇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ ಎಂಬುದಾಗಿಯೂ ಡಿ ಕೆ ಶಿವಕುಮಾರ್ ಹೇಳಿದ್ದು, ಆ ಮೂಲಕ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುವ ನೆಪದಲ್ಲಿ ಜನರ ತೆರಿಗೆ ಹಣವನ್ನು ಪೋಲು ಮಾಡಿರುವುದನ್ನು ಜಗಜ್ಜಾಹೀರು ಮಾಡಿದ್ದಾರೆ.
ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೋಟಿ ಕೋಟಿ ಮೇಲು ಮಾಡುತ್ತಿರುವ ಸಿದ್ದು ಸರ್ಕಾರ, ಬಹುಸಂಖ್ಯಾತರನ್ನು ಮೂಲೆ ಗುಂಪು ಮಾಡಿದ್ದು ಹಳೆಯ ವಿಚಾರ. ಹಾಗೆಯೇ ಆರ್ಥಿಕ ಸಂಪನ್ಮೂಲದ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಜನಸಾಮಾನ್ಯರ ದೈನಂದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಸಿದ್ದು, ಆ ಮೂಲಕ ಜೀವನ ನಡೆಸುವುದಕ್ಕೂ ಕಷ್ಟವಾಗಿಸಿದ್ದು ಸಹ ಸಿದ್ದು ಸರ್ಕಾರ ಕರ್ನಾಟಕದ ಜನರ ಪಾಲಿನ ಹಿಟ್ಲರ್ ಸರ್ಕಾರವಾಗಿದೆ ಎನ್ನುವುದನ್ನು ಸಾರಿ ಹೇಳುತ್ತದೆ. ಇಷ್ಟೆಲ್ಲದರ ನಡುವೆಯೂ ರಾಜ್ಯದ ಅಭಿವೃದ್ಧಿಗೆ ಜನರ ತೆರಿಗೆ ಹಣವನ್ನು ಬಳಕೆ ಮಾಡದೆ, ತಮ್ಮ ಉಚಿತ ಯೋಜನೆಗಳನ್ನು ಜಾರಿಗೆ ತರಲು ರಾಜ್ಯದ ಬೊಕ್ಕಸಕ್ಕೆ ಕನ್ನ ಹಾಕಿದ್ದು ಕರುನಾಡ ಜನರ ಕೆಂಗಣ್ಣಿಗೆ ಕಾಂಗ್ರೆಸ್ ಸರ್ಕಾರ ಗುರಿಯಾಗುವಂತೆ ಮಾಡಿದೆ ಎನ್ನುವುದು ಸತ್ಯ.
ಹೀಗೆಯೇ ಮುಂದುವರಿದಲ್ಲಿ ಸರ್ಕಾರ ರಾಜ್ಯವನ್ನು ಬರ್ಬಾದ್ ಮಾಡಿ, ಇತರ ರಾಜ್ಯಗಳು ಅಥವಾ ಕೇಂದ್ರದಿಂದ ಸಾಲ ಪಡೆಯುವಂತೆ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಜ್ಯವನ್ನು ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳುವ ಎಲ್ಲಾ ಸೂಚನೆಗಳೂ ಕಾಂಗ್ರೆಸ್ ಸರ್ಕಾರದ ಅಪ್ರಬುದ್ಧ ಆಡಳಿತದಲ್ಲಿ ಕಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಅಧೋಗತಿಗೆ ಸಾಗಬಹುದೇ ಎಂಬ ಸಂದೇಹ ಸಹ ಎಲ್ಲರನ್ನೂ ಕಾಡುತ್ತಿದೆ.
ಒಟ್ಟಿನಲ್ಲಿ ರಾಜ್ಯದ ಹಿತವನ್ನು ಬಲಿ ಕೊಟ್ಟು, ತಮ್ಮ ಸ್ವಾರ್ಥ ಸಾಧನೆಗೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರವನ್ನು ಈಗಲೇ ವಿರೋಧಿಸದೇ ಹೋದಲ್ಲಿ, ಮುಂದಿನ ದಿನಗಳಲ್ಲಿ ಇದರ ದುಷ್ಪರಿಣಾಮವನ್ನು ಎದುರಿಸುವವರು ನಾವೇ ಆಗಿರುತ್ತೇವೆ ಎನ್ನುವುದು ಸ್ಪಷ್ಟ. ಕಾಂಗ್ರೆಸ್ ನಾಯಕರು ಬಿಟ್ಟಿ ಭಾಗ್ಯಗೊಳ ಮೂಲಕ ರಾಜ್ಯವನ್ನು ಆರ್ಥಿಕ ಅಧಃಪತನಕ್ಕೆ ನೀಡುವ ಮುನ್ನ ಜಾಗೃತರಾಗೋಣ. ರಾಜ್ಯ ಉಳಿದಲ್ಲಿ ನಾವು ಉಳಿದೇವು. ಅಷ್ಟೇ.
