ಗಾಂಧೀಜಿ ಬ್ರಿಟೀ‍‍‍‍ಷರನ್ನು ತೊಲಗಿಸಿದಂತೆ, ರಾಹುಲ್ ಗಾಂಧಿ ಬಿಜೆಪಿಯನ್ನು ದೇಶದಿಂದ ತೊಲಗಿಸುತ್ತಾರೆ : Bharat Jodo Yatra

ಮಹಾತ್ಮ ಗಾಂಧೀಜಿ ಬ್ರಿಟಿಷರನ್ನು ದೇಶ ಬಿಟ್ಟು ತೊಲಗಿಸಿದಂತೆ ರಾಹುಲ್‌ ಗಾಂಧಿ ಭಾರತ್‌ ಜೋಡೋ ಐಕ್ಯತಾ ಯಾತ್ರೆಯಿಂದ ಬಿಜೆಪಿ ಅಧಿಕಾರದಿಂದ ತೊಲಗಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಮಯೂರ್‌ ಜಯಕುಮಾರ್‌ ಹೇಳಿದ್ದಾರೆ.

ಹರಿಹರ (ಸೆ.28) : ಮಹಾತ್ಮ ಗಾಂಧೀಜಿ ಬ್ರಿಟಿಷರನ್ನು ದೇಶ ಬಿಟ್ಟು ತೊಲಗಿಸಿದಂತೆ ರಾಹುಲ್‌ ಗಾಂಧಿ ಭಾರತ್‌ ಜೋಡೋ ಐಕ್ಯತಾ ಯಾತ್ರೆಯಿಂದ ಬಿಜೆಪಿ ಅಧಿಕಾರದಿಂದ ತೊಲಗಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಮಯೂರ್‌ ಜಯಕುಮಾರ್‌ ಹೇಳಿದ್ದಾರೆ. ನಗರದ ಎಚ್‌.ಕೆ.ವೀರಪ್ಪ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್‌ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಹುಲ್‌ಗಾಂಧಿ 3,570 ಕಿಮೀ ದೂರ ಭಾರತ್‌ ಜೋಡೋ ಪಾದಯಾತ್ರೆ ಮಾಡುತ್ತಿದ್ದು, ಅ.12ಕ್ಕೆ ದಾವಣಗೆರೆಗೆ ಆಗಮಿಸಲಿದೆ. ಪಾದಯಾತ್ರೆಗೆ ಸಂಪೂರ್ಣ ಸಹಕಾರ ನೀಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಶಾಸಕ ಎಸ್‌.ರಾಮಪ್ಪ ಮಾತನಾಡಿ, ರಾಹುಲ್‌ ಗಾಂಧಿಯವರು ಕಾಂಗ್ರೆಸ್‌ನ್ನು ಗೆಲ್ಲಿಸಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅಭೂತಪೂರ್ವ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಿ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಮಾಡಬೇಕಿದೆ ಎಂದು ತಿಳಿಸಿದರು.

ಮುಖಂಡ ಎನ್‌.ಎಚ್‌.ಶ್ರೀನಿವಾಸ್‌ ನಂದಿಗಾವಿ, ಆಡಳಿತದಲ್ಲಿರುವ ಬಿಜೆಪಿ ಪರಿಶಿಷ್ಟಜಾತಿ ಮತ್ತು ವರ್ಗ ಹಾಗೂ ಹಿಂದುಳಿದವರ ಕಾಳಜಿ ಮರೆತಿದೆ. ಇದು 40 ಪರ್ಸೆಂಟ್‌ ಕಮಿಷನ್‌ ಸರ್ಕಾರವಾಗಿದೆ. ಮುಂದೆ ಇದು 50 ಪರ್ಸೆಂಟ್‌ ಆಗುವ ಸಾಧ್ಯತೆ ಇದ್ದು, ಜನರು ಈ ಸರ್ಕಾರವನ್ನು ಕಿತ್ತೊಗೆಯುವ ನಿರ್ಧಾರ ಕೈಗೊಂಡಿದ್ದಾರೆ. ಹಾಗಾಗಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಬೇಕು ಎಂದು ಹೇಳಿದರು. ದೇವೇಂದ್ರಪ್ಪ ಕುಣೆಬೆಳೆಕೆರೆ ಮಾತನಾಡಿ, ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ಏರಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಜನರು ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಜಿಲ್ಲಾ ವಕ್ತಾರರಾದ ಎಂ.ನಾಗೇಂದ್ರಪ್ಪ, ಬಿಜೆಪಿ ಕೆಟ್ಟಸರ್ಕಾರವನ್ನು ಕಿತ್ತೊಗೆಯುವ ನಿರ್ಧಾರದಿಂದ ನಮ್ಮ ನಾಯಕ ರಾಹುಲ್‌ ಗಾಂಧಿ 3570 ಕಿಲೋಮೀಟರ್‌ ಐಕ್ಯತಾ ಪಾದ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.

ಅ.12ರಂದು ಹೊನ್ನಾಳಿಗೆ ಆಗಮನ:

ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಚ್‌.ಬಿ.ಮಂಜಪ್ಪ ಮಾತನಾಡಿ, ಬಿಜೆಪಿಯ ದುರಾಡಳಿತಕ್ಕೆ ದೇಶದ ಜನ ಬೇಸರಗೊಂಡಿದ್ದಾರೆ, ಆಡಳಿತದಿಂದ ಅವರನ್ನು ಕಿತ್ತೊಗೆಯಬೇಕು ಎಂಬ ಆಲೋಚನೆ ಹೊಂದಿರುವ ಈ ಸಂದರ್ಭವನ್ನು ಪಕ್ಷ ಸಮರ್ಪಕವಾಗಿ ಬಳಸಿ ಸಂಘಟನೆ ಮಾಡಿ ಕಾಂಗ್ರೆಸ್‌ನ್ನು ಆಡಳಿತಕ್ಕೆ ತರಲು ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಮುಖಂಡರು ಪ್ರಯತ್ನಿಸಬೇಕು ಎಂದರು. ಪಾದಯಾತ್ರೆ ಅ.12 ರಂದು ಹೊನ್ನಾಳಿ ಮೂಲಕ ಜಿಲ್ಲೆಗೆ ಆಗಮಿಸಿ, ಅ.14 ರಂದು ದಾವಣಗೆರೆಗೆ ಬರಲಿದೆ. ನಂತರ ಅ.16 ರಂದು ಮೊಳಕಾಲ್ಮುರಿಗೆ ತೆರಳಲಿದೆ ಎಂದು ಹೇಳಿದರು.

ಪಕ್ಷದ ವೀಕ್ಷಕರಾದ ಕವಿತಾ ರೆಡ್ಡಿ, ಅಮೃತೇಶ ಸ್ವಾಮಿ, ವಿಜಯಕುಮಾರ್‌, ಬಿ. ರೇವಣಸಿದ್ದಪ್ಪ, ಎ.ಗೋವಿಂದರೆಡ್ಡಿ, ಕುಂಬಳೂರು ವಿರೂಪಾಕ್ಷಪ್ಪ, ನಗರಸಭೆ ಸದಸ್ಯರಾದ ಶಂಕರ್‌ ಕಟಾವ್ಕರ್‌, ಎಂ.ಎಸ್‌. ಬಾಬುಲಾಲ್‌, ಅಬ್ದುಲ್‌ ಅಲೀಮ್‌, ದಾದಾಪೀರ್‌, ಅಶೋಕ್‌ ಮಾಸ್ಟರ್‌, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ನಿಖಿಲ್‌ ಕೊಂಡಜ್ಜಿ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link