ಒಟಿಟಿ ವೇದಿಕೆಯಲ್ಲಿ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಆರೋಗ್ಯ ಎಚ್ಚರಿಕೆ ಪ್ರಕಟಿಸುವುದನ್ನು ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ

ಯುವಜನತೆ ಮದ್ಯಪಾನ, ಧೂಮಪಾನ, ಡ್ರಗ್ಸ್ ಮೊದಲಾದ ಜಾಲಗಳಿಗೆ ಇತ್ತೀಚೆಗೆ ಹೆಚ್ಚು ಹೆಚ್ಚು ಬಲಿಯಾಗುತ್ತಿದ್ದಾರೆ. ಇದಕ್ಕೆ ಜಾಹೀರಾತುಗಳು, ಸಿನೆಮಾ ಇತ್ಯಾದಿಗಳಲ್ಲಿ ಪ್ರಸಾರವಾಗುವ ಸಹ ಕೊಂಚ ತಮ್ಮ ಕೊಡುಗೆಗಳನ್ನು ನೀಡುತ್ತವೆ ಎನ್ನುವುದು ಸುಳ್ಳಲ್ಲ. ಸಿನೆಮಾ, ಧಾರಾವಾಹಿ, ಶಾರ್ಟ್ ಮೂವಿ, ಜಾಹೀರಾತುಗಳು ಹೀಗೆ ಮನರಂಜನೆಯ ವಿಷಯಗಳಲ್ಲಿ ಬರುವ ಮಾದಕ ವ್ಯಸನದ ದೃಶ್ಯಗಳು ಕೂಡಾ ಜನರನ್ನು ತಮ್ಮತ್ತ ಹೆಚ್ಚು ಆಕರ್ಷಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಈಗಾಗಲೇ ಚಿತ್ರಮಂದಿರಗಳು, ಧಾರಾವಾಹಿಗಳು, ಟಿವಿಯಲ್ಲಿ ಬರುವ ಚಲನಚಿತ್ರಗಳಲ್ಲಿ ಇಂತಹ ದುಶ್ಚಟಗಳ ದೃಶ್ಯಗಳಿವೆ ಎಂದಾದಲ್ಲಿ, ಅವುಗಳು ಪ್ರಸಾರವಾಗುವಾಗಲೆ ಅಂತಹ ದುಶ್ಚಟಗಳು ಆರೋಗ್ಯಕ್ಕೆ ಹಾನಿಕರ ಎಂಬ ಎಚ್ಚರಿಕೆಯ ಸಂದೇಶವನ್ನು ಸಹ ಜೊತೆ ಜೊತೆಗೆಯೇ ಹಾಕಲಾಗುತ್ತದೆ. ಇದೇ ವ್ಯವಸ್ಥೆಯನ್ನು ಒಟಿಟಿ ವೇದಿಕೆಗಳಲ್ಲಿಯೂ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಅಮೆಜಾನ್ ಪ್ರೈಮ್, ಹಾಟ್‌ಸ್ಪಾಟ್ ಗಳಂತಹ ಒಟಿಟಿ ವೇದಿಕೆಗಳಲ್ಲಿ ಕಾರ್ಯಕ್ರಮದ ಸಂದರ್ಭದಲ್ಲಿ ತಂಬಾಕು ಉತ್ಪನ್ನಗಳು ಮತ್ತು ಅವುಗಳ ಬಳಕೆಗೆ ಸಂಬಂಧಿಸಿದಂತೆ ವಿಷಯಗಳನ್ನು ಪ್ರಸ್ತುತ ಪಡಿಸುವಾಗ, ಅವುಗಳಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆಯನ್ನು ಸಹ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂಬುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಈ ಸಂಬಂಧ ಕೇಂದ್ರ ಸರ್ಕಾರ ರಾಜ್ಯ ಸಭೆಗೆ ಮಾಹಿತಿಯನ್ನು ಸಹ ನೀಡಿದ್ದು, ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ತಿದ್ದುಪಡಿ ನಿಯಮಗಳು ೨೦೨೩ ರನ್ನು ಮೇ ೩೧ ರಂದೇ ಕೇಂದ್ರ ಸರ್ಕಾರ ಹೊರಡಿಸಿದೆ ಎಂದು ತಿಳಿಸಿದೆ. ಜಾಹೀರಾತು ನಿಷೇಧ, ವ್ಯಾಪಾರ ಮತ್ತು ವಾಣಿಜ್ಯ ನಿಯಂತ್ರಣ, ಸರಬರಾಜು ಮತ್ತು ವಿತರಣೆಗೆ ಸಂಬಂಧಿಸಿದ ಹಾಗೆ ನಿಯಮಗಳನ್ನು ಈ ತಿದ್ದುಪಡಿ ಒಳಗೊಂಡಿರುವುದಾಗಿಯೂ ಸರ್ಕಾರ ಮಾಹಿತಿ ನೀಡಿದೆ.

ತಂಬಾಕು ಉತ್ಪನ್ನಗಳಿಗೆ ಸಂಬಂಧಿಸಿದ ವಿಷಯಗಳಿಂದ ಕೂಡಿದ ಯಾವುದೇ ಕಂಟೆಂಟ್‌ಗಳನ್ನು ಆನ್‌ಲೈನ್‌ ಮೂಲಕ ಪ್ರದರ್ಶಿಸುವ ಸಂದರ್ಭದಲ್ಲಿ ಆರೋಗ್ಯದ ಬಗೆಗಿನ ಎಚ್ಚರಿಕೆ ಸಂದೇಶಗಳು ಮತ್ತು ಹಕ್ಕು ನಿರಾಕರಣೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ಕೇಂದ್ರ ಸರ್ಕಾರ ಸೂಚಿಸಿದೆ. ಈ ಅಧಿಸೂಚನೆಯಲ್ಲಿ ತಂಬಾಕಿನ ಬಳಕೆಗೆ ಸಂಬಂಧಿಸಿದ ಹಾಗೆ ವಿಷಯಗಳು ಬಂದಾಗ, ಅದರ ಬಳಕೆಯಿಂದ ಭವಿಷ್ಯದಲ್ಲಿ ಕಾಡಬಹುದಾದ ಆರೋಗ್ಯ ಸಮಸ್ಯೆಗಳ ಬಗೆಗೆ ಎಚ್ಚರಿಕೆ ನೀಡಿ, ಯುವ ಜನರಲ್ಲಿ ಜಾಗೃತಿ ಮೂಡಿಸುವಂತೆಯೂ ಕೇಂದ್ರ ಸರ್ಕಾರ ತಿಳಿಸಿದೆ.

ಇಂತಹ ವಿಷಯಗಳನ್ನು ಪ್ರಸ್ತುತ ಪಡಿಸುವ ನಿರ್ದೇಶಕರು, ತಮ್ಮ ಕಾರ್ಯಕ್ರಮ ಆರಂಭಕ್ಕೂ ಮೊದಲು ಮತ್ತು ಮಧ್ಯ ಭಾಗದಲ್ಲಿ ಮೂವತ್ತು ಸೆಕೆಂಡುಗಳ ಕಾಲವಾದರೂ ತಂಬಾಕು ವಿರೋಧಿ ಜಾಹೀರಾತುಗಳನ್ನು ಪ್ರಸ್ತುತ ಪಡಿಸುವುದನ್ನು ಸಹ ಕಡ್ಡಾಯಗೊಳಿಸಲಾಗಿದೆ. ತಂಬಾಕಿಗೆ ಸಂಬಂಧಿಸಿದ ಸೀನ್‌ಗಳು ಪ್ರಸಾರವಾಗುವಾಗಲೂ ಪರದೆಯ ಕೆಳ ಭಾಗದಲ್ಲಿ ಕನಿಷ್ಟ ಇಪ್ಪತ್ತು ಸೆಕೆಂಡ್‌ಗಳ ಕಾಲವಾದರೂ ಆರೋಗ್ಯ ಎಚ್ಚರಿಕೆಯನ್ನು ಪ್ರಕಟಿಸಬೇಕು ಎಂಬುದಾಗಿಯೂ ಸರ್ಕಾರ ಮಾಹಿತಿಯನ್ನು ನೀಡಿದೆ. ಈ ‌ಎಚ್ಚರಿಕಾ ಸಂದೇಶವನ್ನು ಧ್ವನಿ ಮತ್ತು ದೃಶ್ಯಗಳ ಮೂಲಕ ಪ್ರಸಾರ ಮಾಡತಕ್ಕದ್ದು ಎಂಬುದಾಗಿಯೂ ಸರ್ಕಾರ ಒಟಿಟಿ ಪ್ಲಾಟ್ಫಾರಂ ಗಳಿಗೆ ಸೂಚನೆ ನೀಡಿದೆ.

ಒಟ್ಟಿನಲ್ಲಿ ಯುವ ಜನರಲ್ಲಿ ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ಹಾನಿಯ ಬಗ್ಗೆ ಎಚ್ಚರ ಮೂಡಿಸಲು ಕೇಂದ್ರ ಸರ್ಕಾರ ತೆಗೆದುಕೊಂಡ ಈ ನಿರ್ಣಯ ನಿಜಕ್ಕೂ ಶ್ಲಾಘನೀಯ. ಹಾಗೆಯೇ ತಂಬಾಕು ಮುಕ್ತ, ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೂ ಕೇಂದ್ರ ಸರ್ಕಾರದ ಈ ಅಧಿಸೂಚನೆ ಉಪಯುಕ್ತವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

Recent Articles

spot_img

Related Stories

Share via
Copy link