ಉಗ್ರರನ್ನು ಭಯೋತ್ಪಾದಕರು ಅನ್ನಲ್ವಂತೆ ಕಾಂಗ್ರೆಸಿಗರು

ಭಾರತಕ್ಕೆ ಹೆಚ್ಚು ಅಪಾಯ ತಂದೊಡ್ಡುತ್ತಿರುವ ಹಲವಾರು ವಿಷಯಗಳಲ್ಲಿ ಉಗ್ರವಾದವೂ ಒಂದು. ನಮ್ಮ ನೆರೆಯ ದೇಶ, ಭಾರತದ ಶತ್ರು ರಾಷ್ಟ್ರ ಎಂದೇ ವಿಶ್ವದೆಲ್ಲೆಡೆ ಕುಖ್ಯಾತಿ ಪಡೆದಿರುವ ಪಾಕಿಸ್ತಾನ‌ವಂತೂ ಉಗ್ರವಾದದ ಮೂಲಕವೇ ಭಾರತವನ್ನು ಕಾಡುತ್ತ ಬಂದಿರುವುದು ಸುಳ್ಳಲ್ಲ.

ಆದರೆ ಪ್ರಧಾನಿ ಮೋದಿ ಅವರು ಭಾರತದ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಪಾಕ್ ಉಗ್ರರನ್ನು, ಅವರನ್ನು ಪೋಷಿಸಿ ಭಾರತದ ವಿರುದ್ಧ ಛೂ ಬಿಡುವ ಪಾಕಿಸ್ತಾನ‌ವನ್ನು ಕೊಂಚ ಮಟ್ಟಿಗೆ ಹದ್ದುಬಸ್ತಿನಲ್ಲಿಡಲು ಸಾಧ್ಯವಾಗಿದೆ ಎಂದರೆ ತಪ್ಪಲ್ಲ. ಅದಕ್ಕೂ ಮುನ್ನ ಭಾರತವನ್ನಾಳಿದ ಕಾಂಗ್ರೆಸ್ ಪಕ್ಷ ಉಗ್ರರನ್ನು ಮಟ್ಟಹಾಕುವಲ್ಲಿ ಸಂಪೂರ್ಣ ಸೋತು ಹೋಗಿತ್ತು. ಅವರು ಪಾಕಿಸ್ತಾನಕ್ಕೆ ಹೆದರಿ ಬದುಕುವ ಹಾಗೆ ಭಾರತದಲ್ಲಿ ಆಡಳಿತ ನಡೆಸುತ್ತಿದ್ದರು ಎನ್ನುವುದು ನಿರ್ವಿವಾದ.

ಆದರೆ ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಪಾಕಿಸ್ತಾನದ ಉಗ್ರ ನೆಲೆಗಳಿಗೆ ‌ನುಗ್ಗಿ ಹೊಡೆಯುವ, ಭಯೋತ್ಪಾದಕರ ನೆಲೆಗಳನ್ನೇ ನೆಲಸಮ ಮಾಡುವ, ವಿಶ್ವದೆದುರು ಪಾಕಿಸ್ತಾನದ ಉಗ್ರಗಾಮಿ ಮನಸ್ಥಿತಿಯನ್ನು ಧೈರ್ಯದಿಂದ ಬಿಚ್ಚಿಡುವ ಮತ್ತು ಇಡೀ ವಿಶ್ವಕ್ಕೆ ಪಾಕಿಸ್ತಾನದ ಹೀನ ಬುದ್ಧಿಯನ್ನು ಪರಿಚಯಿಸುವ ತಾಕತ್ತು ಭಾರತಕ್ಕೆ ಬಂದಿದೆ. ಹಾಗೆಯೇ, ಭಾರತ ಎಂದರೆ ಪಾಕಿಸ್ತಾನ ಇಂದು ಗಡಗಡ ನಡುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆದರೆ ಮೋದಿ ಸರ್ಕಾರ ಉಗ್ರ ವಿರುದ್ಧ ಯಾವುದೇ ಕಾರ್ಯಾಚರಣೆ, ಕ್ರಮ ಕೈಗೊಳ್ಳಲಿ, ಕಾಂಗ್ರೆಸಿಗರು ಮಾತ್ರ ಅದನ್ನು ಸುಳ್ಳು ಎಂಬುದಾಗಿ ಹೇಳಿಕೊಂಡು, ನಮ್ಮ ಸೈನಿಕರ ಸಾಮರ್ಥ್ಯ ಪ್ರಶ್ನೆ ಮಾಡಿಕೊಂಡು ಉಗ್ರ ರಿಗೆ ಪರವಾಗಿ ಮಾತನಾಡುತ್ತಾರೆ ಎನ್ನುವುದು ದುರಂತ. ಪಟ್ಟಿ ಮಾಡುತ್ತಾ ಹೋದರೆ, ಈ ಹಿಂದೆಯೂ ಉಗ್ರರ ಪರವಾಗಿಯೇ ಕಾಂಗ್ರೆಸ್ ನಿಂತ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ಕಾಣುತ್ತಾ ಹೋಗುತ್ತವೆ.

ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಹೆಚ್ಚಿನವರು ದ್ವೇಷಿಸಲು ಕಾರಣ ಅವರ ಉಗ್ರ ಪರ ನಿಲುವುಗಳೇ ಎಂದರೂ ಅತಿಶಯವಾಗಲಾರದೇನೋ. ಅಂದ ಹಾಗೆ ಕರ್ನಾಟಕ ಕಾಂಗ್ರೆಸ್‌ನ ಸ್ಥಿತಿಯೂ ಭಿನ್ನವಲ್ಲ. ಈ ಹಿಂದೆಯೇ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಸಂದರ್ಭದಲ್ಲಿ ತನಿಖಾ ಸಂಸ್ಥೆಗಳೇ ದಾಳಿ ನಡೆಸಿದ ಶಾಂತಿ ದೂತ ಸಮುದಾಯದ ಶಾರಿಕ್ ಎಂಬ ಆರೋಪಿಯನ್ನು ಉಗ್ರ ಎಂದು ಗುರುತಿಸಿದ್ದರೂ, ಕಾಂಗ್ರೆಸ್ ಮಾತ್ರ ಅವನನ್ನು ಯಾವ ಆಧಾರದಲ್ಲಿ ಉಗ್ರ ಎಂದು ಹೇಳಲಾಗಿದೆ? ಎಂದು ಪ್ರಶ್ನಿಸಿತ್ತು. ಹಿಂದೆಯೂ ಸದ್ಯ ಕರ್ನಾಟಕ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿರುವ ಡಿ ಕೆ ಶಿವಕುಮಾರ್ ಅವರು ಶಾಂತಿ ದೂತ ಸಮುದಾಯದವರು ನಮ್ಮ ಬ್ರದರ್ಸ್ ಎನ್ನುವ ಮೂಲಕ ಉಗ್ರರಿಗೂ ಸಹೋದರ ಸ್ಥಾನವನ್ನು ನೀಡಿ, ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡವಲು ನಮ್ಮ ಪರೋಕ್ಷ ಬೆಂಬಲ ಇದೆ ಎನ್ನುವುದನ್ನು ಸಾಬೀತು ಮಾಡಿದವರು. ಹಾಗೆಯೇ ಕೆಲವೇ ಸಮಯದ ಹಿಂದೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ನಾಯಕನೊಬ್ಬನ ಪುತ್ರನನ್ನು ಉಗ್ರವಾದಿ ಚಟುವಟಿಕೆ ನಡೆಸಿದ ಕಾರಣಕ್ಕೆ ಎನ್‌ಐಎ ಬಂಧಿಸಿತ್ತು ಎನ್ನುವುದು ಕಾಂಗ್ರೆಸ್ ಮತ್ತು ಉಗ್ರರ ನಡುವಿನ ಸಂಬಂಧವನ್ನು ಬಯಲು ಮಾಡಿತ್ತು.

ಹಾಗೆಯೇ ರಾಷ್ಟ್ರೀಯ ಕಾಂಗ್ರೆಸ್ ಸಹ ಈ ಹಿಂದೆ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಬೆಂಬಲದಲ್ಲಿ ನಮ್ಮ ಹೆಮ್ಮೆಯ ಸೈನಿಕರು ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ದಾಳಿ, ಗಡಿಯಲ್ಲಿನ ಉಗ್ರ ವಿರುದ್ಧದ ಕಾರ್ಯಾಚರಣೆ ಎಲ್ಲವನ್ನೂ ಪ್ರಶ್ನೆ ಮಾಡುತ್ತಾ, ಸುಳ್ಳು ಎಂಬುದಾಗಿ ಬಿಂಬಿಸಲು ಹೊರಟು ತಾವೇನಿದ್ದರೂ ಪಾಕ್ ಪರ, ಉಗ್ರರ ಪರ ಎನ್ನುವುದನ್ನು ಸಾಧಿಸಿ ತೋರಿಸಿದವರು.

ಪ್ರಧಾನಿ ಮೋದಿ ಅವರ ತೀಕ್ಷ್ಣ ಉಗ್ರ ವಿರೋಧಿ ನೀತಿಗಳಿಂದಾಗಿ ಭಾರತದ ಹೊರಗಿನ ಉಗ್ರರ ಜೊತೆಗೆ, ಭಾರತದೊಳಗೇ ಅಡಗಿದ್ದ ಉಗ್ರರೂ ನೆಲೆ ಕಳೆದುಕೊಂಡು ರಕ್ಷಣಾ ಪಡೆಗಳ ವಶವಾಗುತ್ತಿದ್ದಾರೆ. ಅವರು ನಡೆಸುವ ವಿದ್ವಂಸಕ ಕೃತ್ಯಗಳ ಯೋಜನೆಗಳು ವಿಫಲವಾಗುತ್ತಿವೆ. ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಸೂಸೈಡ್ ಬಾಂಬರ್ ಸೇರಿ ಒಟ್ಟು ಐದು ಜನ ಭಯೋತ್ಪಾದಕರನ್ನು ಎನ್‌ಐ‌ಎ ಬಂಧಿಸಿತ್ತು. ಆದರೆ ಈ ಬಂಧಿತ ಉಗ್ರರನ್ನು ಈಗಲೇ ಭಯೋತ್ಪಾದಕರು ಎಂದು ಹೇಳಲು ಸಾಧ್ಯವಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ಸರ್ಕಾರದ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದು, ಆ ಮೂಲಕ ರಾಜ್ಯದಲ್ಲಿ ಏನೇ ವಿದ್ವಂಸಕ ಕೃತ್ಯಗಳು ಬೇಕಾದರೂ ನಡೆಯಲಿ, ಕಾಂಗ್ರೆಸ್ ಮಾತ್ರ ಉಗ್ರರನ್ನು ಉಗ್ರರೆಂದು ಹೇಳಲು ಸಿದ್ಧವಿಲ್ಲ ಎಂಬುದಕ್ಕೆ ಮತ್ತೆ ಪುಷ್ಟಿ ನೀಡಿದ್ದಾರೆ. ಆ ಮೂಲಕ ಮತ್ತೆ ತಾವು ಮತ್ತು ತಮ್ಮ ಪಕ್ಷ ಉಗ್ರರಿಗೆ ಬೆಂಬಲ ಎಂಬಂತೆ ಹೇಳಿಕೆ ನೀಡಿ, ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.

ಉಗ್ರ ಚಟುವಟಿಕೆ ನಡೆಸಿ ಬಂಧನಕ್ಕೆ ಒಳಗಾದವರನ್ನು ಸಹ ಉಗ್ರರೆಂದು ಒಪ್ಪಿಕೊಳ್ಳದೆ, ಸಹೋದರರಂತೆ ಕಾಣುವ ಕಾಂಗ್ರೆಸ್ ಪಕ್ಷ ದೇಶಕ್ಕೆ ಅಪಾಯಕಾರಿಯೇ ಸರಿ. ನಮ್ಮ ದೇಶದಲ್ಲಿ ಯಾವುದೇ ಹಾನಿ ಎಸಗದ ಹಿಂದೂ ಧರ್ಮವನ್ನು ಕಂಡರಾಗದ ಕಾಂಗ್ರೆಸ್ ಪಕ್ಷ, ಉಗ್ರರಿಗೆ ಮಾತ್ರ ರಾಜ ಮರ್ಯಾದೆ ನೀಡುವುದು, ಅವರನ್ನು ಉಗ್ರರು ಎನ್ನುವುದಕ್ಕೂ ಹಿಂದೇಟು ಹಾಕುತ್ತಿರುವುದು ಕಾಂಗ್ರೆಸ್ನಿಂದಾಗಿ ದೇಶಕ್ಕೆ ಭವಿಷ್ಯದಲ್ಲಿ ಆಗಬಹುದಾದ ಸಮಸ್ಯೆಗಳಿಗೆ, ಆಪತ್ತುಗಳಿಗೆ ಮುನ್ನುಡಿ ಎನ್ನಬಹುದು. ಉಗ್ರ ಪ್ರೇಮಿ ಕಾಂಗ್ರೆಸ್ ಪಕ್ಷದ ಬಗ್ಗೆ ಎಚ್ಚರದಿಂದಿದ್ದಷ್ಟು ದೇಶಕ್ಕೂ ಒಳಿತು. ಜೊತೆಗೆ ನಮಗೂ.

Recent Articles

spot_img

Related Stories

Share via
Copy link